ವಿಟ್ಲದಲ್ಲಿ ಕಳವು ಪ್ರಕರಣ : ಓರ್ವ ಆರೋಪಿ ಸೆರೆ

ಬಂಟ್ವಾಳ, ಜ. 12: ವಿಟ್ಲ ಪರಿಸರದ ಮನೆಯೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಪೈಕಿ ಓರ್ವನನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿ, ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಒಕ್ಕೆತ್ತೂರು ಸುರಂಬಡ್ಕ ನಿವಾಸಿ ಮುಹಮ್ಮದ್ ಅಶ್ರಫ್ (29) ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಆರೋಪಿಯಿಂದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕಾರು, ಮೋಟಾರ್ ಸೈಕಲ್, 30 ಸಾವಿರ ರೂ. ನಗದು ಸೇರಿ ಒಟ್ಟು 15.80 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ: ಕಳೆದ ತಿಂಗಳು ವಿಟ್ಲ ಮನೆಯೊಂದಕ್ಕೆ ನುಗ್ಗಿ ಸುಮಾರು 44 ಪವನ್ ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಶಂಕಿತ ಆರೋಪಿಯನ್ನು ವಿಚಾರಣೆ ನಡೆಸಿದಾಗ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಕಳವು ಗೈದ ಆಭರಣಗಳನ್ನು ಬಂಟ್ವಾಳ ಮತ್ತು ಮಂಗಳಪದವಿನ ಚಿನ್ನದ ಅಂಗಡಿಗೆ ಮಾರಾಟ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಜಿತ್ ವಿ.ಜೆ., ಪೊಲೀಸ್ ಉಪಾಧೀಕ್ಷಕ ಶೀನಿವಾಸ ವಿ.ಎಸ್. ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಪ್ರಕಾಶ್ ಎಂ.ಎಸ್. ನೇತೃತ್ವದಲ್ಲಿ ವಿಟ್ಲ ಠಾಣಾ ಉಪ ನಿರೀಕ್ಷಕ ನಾಗರಾಜ್ ಎಚ್.ಇ., ಪ್ರೋಬೆಷನರಿ ಪಿಎಸ್ಸೈ ಸೌಮ್ಯ, ಸಿಬ್ಬಂದಿ ಜಯಕುಮಾರ್, ಬಾಲಕೃಷ್ಣ, ಗಿರೀಶ್, ಶ್ರೀಧರ, ರಮೇಶ್, ರಕ್ಷಿತ್, ಅಭಿಜಿತ್, ಲೋಕೇಶ, ಪ್ರವೀಣ್, ಜಗದೀಶ, ಸತೀಶ, ಬಿರೇಶ್, ಚಾಲಕರಾದ ರಘುರಾಮ, ವಿಜಯೇಶ್ವರ, ಗಣಕಯಂತ್ರ ಸಿಬ್ಬಂದಿ ದಿವಾಕರ್, ಸಂಪತ್ತ್ ಕುಮಾರ್, ಹೋಂ ಗಾರ್ಡ್ ರಮೇಶ್ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ್ದಾರೆ.







