ಕ್ರೈಸ್ತ ಸಮುದಾಯದ ಶಿಕ್ಷಣ, ಆರೋಗ್ಯ, ಸಮಾಜ ಸೇವೆ ಮಾದರಿ: ಗೃಹ ಸಚಿವ ರಾಮಲಿಂಗ ರೆಡ್ಡಿ
ನವೀಕೃತ ಸೈಂಟ್ ಮೇರಿಸ್ ಓರ್ಥೋಡಕ್ಸ್ ಸಿರಿಯನ್ ಚರ್ಚ್ ಉದ್ಘಾಟನೆ

ಬ್ರಹ್ಮಾವರ, ಜ.12: ಕ್ರೈಸ್ತ ಸಮುದಾಯ ದೇಶದ ಶಿಕ್ಷಣ, ಆರೋಗ್ಯ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಶುಕ್ರವಾರ ನಡೆದ ಬ್ರಹ್ಮಾವರ ಸೈಂಟ್ ಮೇರಿಸ್ ಸಿರಿಯನ್ ಓರ್ಥೋಡಕ್ಸ್ ಕ್ಯಾಥೆಡ್ರಲ್ ಇದರ ನವೀಕೃತ ಕಟ್ಟಡದ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಕ್ರೈಸ್ತ ಸಮುದಾಯ ಸದಾ ಶಾಂತಿ ಬಯಸುವ ಸಮಾಜವಾಗಿದ್ದು, ಅವರ ಶಿಸ್ತುಭರಿತ ಸೇವಾಜೀವನ ಇಡೀ ದೇಶಕ್ಕೆ ಮಾದರಿಯಾಗಿದೆ. ಈ ಸಮುದಾಯ ದೇಶದ ಮೂಲೆ ಮೂಲೆಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸುವುದರೊಂದಿಗೆ ತಮ್ಮ ಶಿಸ್ತುಬದ್ದ ಮತ್ತು ಗುಣಮಟ್ಟದ ಶಿಕ್ಷಣದಿಂದ ಮಾತ್ರವಲ್ಲದೇ ನಿಸ್ವಾರ್ಥ ಸೇವೆಯ ಮೂಲಕ ದೇಶದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದೆ ಎಂದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಮಲಂಕರ ಓರ್ಥೋಡೋಕ್ಸ್ ಸಿರಿಯನ್ ಸಭಾದ ಪರಮಾಧ್ಯಕ್ಷರಾದ ಪರಮಪೂಜ್ಯ ಮೋರಾನ್ ಮೋರ್ ಬಸ್ಸೆಲಿಯೋಸ್ ಮಾರ್ತೋಮಾ ಪೌಲೋಸ್ ದ್ವಿತೀಯ ಮಾತನಾಡಿ, ದೇವಾಲಯ ಎಂಬುದು ದೇವರು ತನ್ನ ಅನುಯಾಯಿಗಳಿಗೆ ಬೆಳಕು ನೀಡುವ ಸ್ಥಳವಾಗಿದೆ. ಯೇಸುಸ್ವಾಮಿ ಹೇಳಿದಂತೆ ದೇವಾಲಯದ ಮೂಲಕ ನಾವು ಬಡವರ, ದೀನದಲಿತರ ಸೇವೆಯೊಂದಿಗೆ ದೇವರ ಪ್ರೀತಿ ಯನ್ನು ಹಂಚಿಕೊಳ್ಳಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕ್ರೈಸ್ತ ಸಮುದಾಯದ ಏಳಿಗೆಗೆ ಸದಾ ಕಟಿಬದ್ದವಾಗಿದೆ. ಬ್ರಹ್ಮಾವರ ಚರ್ಚಿನ ಕಟ್ಟಡಕ್ಕೂ ಸರಕಾರ 50 ಲಕ್ಷರೂ. ಅನುದಾನ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಚರ್ಚಿನ ವಿಕಾರ್ ಜನರಲ್ ವಂ. ಸಿ.ಎ. ಐಸಾಕ್, ಟ್ರಸ್ಟಿ ಅನಿಲ್ ರೊಡ್ರಿಗಸ್, ಕಟ್ಟಡ ಸಮಿತಿಯ ಸಂಚಾಲಕ ಅಲನ್ ರೋಹನ್ ವಾಝ್, ಕಾರ್ಯದರ್ಶಿ ಐವನ್ ಸುವಾರಿಸ್, ವಿಲ್ಸನ್ ಲೂವಿಸ್ ಇವರುಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಉಡುಪಿ ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ, ಬ್ರಹ್ಮಾವರ ಸೀರಿಯನ್ ಓರ್ಥೊಡಕ್ಸ್ ಧರ್ಮಪ್ರಾಂತದ ಧರ್ಮಾಧ್ಯಕ್ಷ ವಂ.ಯಾಕೂಬ್ ಮಾರ್ ಏಲಿಯಾಸ್, ಕೊಲ್ಕತ್ತಾ ಧರ್ಮಪ್ರಾಂತದ ಬಿಷಪ್ ಜೋಸೆಫ್ ಮಾರ್ ದಿಯಾನಿಯೊಸ್, ಮುಂಬೈ ಧರ್ಮಪ್ರಾಂತದ ಗೀರ್ ವರ್ಗೀಸ್ ಮಾರ್ ಕೂರಿಲೋಸ್, ಅಹಮದಾಬಾದ್ ಧರ್ಮಪ್ರಾಂತದ ಗೀರ್ ವರ್ಗೀಸ್ ಮಾರ್ ಯೂಲಿ ಯೋಸ್, ಬೆಂಗಳೂರು ಧರ್ಮಪ್ರಾಂತದ ಅಬ್ರಹಾಂ ಮಾರ್ ಸೆರಾಫೀಮ್, ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನವೀನ್ ನಾಯಕ್, ವಂ.ಡಾ. ಎಂ.ಒ. ಜೋನ್, ಕಿರಿಮಂಜೇಶ್ವರ ಮೊಹ್ಮದೀಯ ಜುಮ್ಮಾ ಮಸೀದಿಯ ಮುಸ್ಲಿಯಾರ್ ಹಾಜಿ ಕೆ ಇಸ್ಮಾಯಿಲ್ ನಾವುಂದ, ಸಹಾಯಕ ಧರ್ಮಗುರುಗಳಾದ ವಂ.ಲೋರೆನ್ಸ್ ಡಿಸೋಜಾ, ವಂ ಡೇವಿಡ್ ಕ್ರಾಸಾತಿ, ವಂ. ಅಬ್ರಾಹಾಂ ಕುರಿಯಾಕೋಸ್, ಹಾಗೂ ಇತರರು ಉಪಸ್ಥಿತರಿದ್ದರು.
ಚರ್ಚಿನ ವಿಕಾರ್ ಜನರಲ್ ವಂ.ಸಿ.ಎ.ಐಸಾಕ್ ಸ್ವಾಗತಿಸಿ, ಟ್ರಸ್ಟಿ ಅನಿಲ್ ರೊಡ್ರಿಗಸ್ ವಂದಿಸಿದರು. ಅನಿಲ್ ಲೋಬೊ ಮತ್ತು ಅರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಲೋಕಾರ್ಪಣೆ: ಇಂದು ಬೆಳಗಿನ ಜಾವ 6:30ರಿಂದ ಕೆಥೆಡ್ರಲ್ ಕಟ್ಟಡದ ಲೋಕಾರ್ಪಣೆ, ಆಶೀರ್ವಚನ ಹಾಗೂ ಶುದ್ದಿಕರಣ ಕಾರ್ಯಕ್ರಮ ಜರುಗಿತು. ಮಲಂಕರ ಓರ್ಥೋಡೋಕ್ಸ್ ಸಿರಿಯನ್ ಸಭಾದ ಪರಮಾಧ್ಯಕ್ಷರಾದ ಪರಮಪೂಜ್ಯ ಮೋರಾನ್ ಮೋರ್ ಬಸ್ಸೆಲಿಯೋಸ್ ಮಾರ್ತೋಮಾ ಪೌಲೋಸ್ ದ್ವಿತೀಯರು ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ರಾತ್ರಿ ಪ್ರಾರ್ಥನೆ, ಪ್ರಭಾತ ಪ್ರಾರ್ಥನೆ ಬಳಿಕ ಪವಿತ್ರ ಶುದ್ದಿಕರಣದ ಎರಡನೇ ಭಾಗ ಪ್ರಾರಂಭವಾಯಿತು. ದೇವಳದ ಎಲ್ಲಾ ಕಡೆ ಪವಿತ್ರ ಗಂಧವನ್ನ ಹಚ್ಚುವ ಮೂಲಕ ಶುದ್ಧಿಕರಿಸಿ, ಪವಿತ್ರ ಶಿಲುಬೆಯನ್ನ ಪ್ರತಿಷ್ಟೆ ಮಾಡಲಾಯಿತು. ನಂತರ ಪವಿತ್ರ ಬಲಿಪೂಜೆಯನ್ನ ನೆರವೇರಿಸಲಾಯಿತು.
ಪವಿತ್ರ ತೀರ್ಥಕ್ಷೇತ್ರವಾಗಿ ಘೋಷಣೆ
ಬ್ರಹ್ಮಾವರದ ಸೈಂಟ್ ಮೇರಿಸ್ ಓರ್ಥೋಡಾಕ್ಸ್ ಸಿರಿಯನ್ ಚರ್ಚ್‌ನ್ನು ಪವಿತ್ರ ತೀರ್ಥ ಕ್ಷೇತ್ರವನ್ನಾಗಿ ಪರಮಾಧ್ಯಕ್ಷ ಪ.ಪೂ. ಮಾರ್ತೋಮಾ ಪೌಲೋಸ್ ದ್ವಿತೀಯ ಇದೇ ಸಂದರ್ಭ ಘೋಷಿಸಿದರು.







