ಹೈಕೋರ್ಟ್‌ನ ಆದೇಶ ಮೀರಿದ ಹಿನ್ನೆಲೆ: ದ.ಕ. ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ಪ್ರಕರಣ ದಾಖಲು
ಬಂಟ್ವಾಳ, ಜ. 12: ಮುಳುಗಡೆ ಜಮೀನಿನ ಮಾಲಕರಿಗೆ ಪರಿಹಾರ ಮೊತ್ತ ನೀಡಿದ ಬಳಿಕವೇ 5 ಮೀಟರ್‌ಗಿಂತ ಅಧಿಕ ನೀರು ಸಂಗ್ರಹಹಿಸಬೇಕೆಂಬ ರಾಜ್ಯ ಹೈಕೋರ್ಟ್‌ನ ಆದೇಶವನ್ನು ಮೀರಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ.
ತುಂಬೆ ವೆಂಟೆಡ್ ಡ್ಯಾಂನಿಂದ ಮುಳುಗಡೆಯಾಗುವ ಜಮೀನನ್ನು ರೈತರ ಸಮಕ್ಷಮ ವೈಜ್ಞಾನಿಕವಾಗಿ ಪರಿಹಾರ ನೀಡಿ ನ್ಯಾಯೋಚಿತ ಪರಿಹಾರ ನೀಡಬೇಕು. ಈ ಬಗ್ಗೆ ಸ್ಪಷ್ಟವಾದ ಚಿತ್ರಣವನ್ನು ರೈತರಿಗೆ ನೀಡಬೇಕು ಎನ್ನುವ ಆದೇಶವನ್ನು 2016 ಮಾರ್ಚ್ 23ರಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಧಿಕಾರಿಗಳಿಗೆ ನೀಡಿದ್ದರು. ಆದರೆ ಜಿಲ್ಲಾಧಿಕಾರಿಯ ಆದೇಶ ಜಾರಿಯಾಗದೇ ಇದ್ದಾಗ ಸಂತ್ರಸ್ತ ರೈತರು ರೈತಸಂಘ ಹಸಿರು ಸೇನೆಯ ನೇತೃತ್ವದಲ್ಲಿ ಜಂಟಿಯಾಗಿ ಹೈಕೋಟಿನಲ್ಲಿ ದಾವೆ ಹೂಡಿದ್ದರು.
ಕೇಂದ್ರ ಜಲ ಆಯೋಗದ ನಿರ್ದೇಶನದಂತೆ ಒಂದು ತಿಂಗಳೊಳಗೆ ಮರು ಸರ್ವೇ ನಡೆಸಿ ರೈತರಿಗೆ ಸೂಕ್ತಪರಿಹಾರ ನೀಡುವಂತೆ ಹೈಕೋರ್ಟ್ ಸರಕಾರಕ್ಕೆ ಆದೇಶಿಸಿದ್ದರೂ ಇದಕ್ಕೆ ಸ್ಪಂದಿಸದ ಸರಕಾರ ನಿರ್ಲಕ್ಷ ವಹಿಸಿತ್ತು. ಆ ಬಳಿಕ ಕಳೆದ ಮಾರ್ಚ್ 14ರಂದು ಮತ್ತೆ ವಕೀಲರ ಮೂಲಕ ನೆನೆಪೋಲೆಯನ್ನು ಕಳುಹಿಸಲಾಯಿತಾರೂ ಈ ತನಕ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ನ್ಯಾಯಂಗ ಪ್ರಕರಣ ದಾಖಲಿಸಲಾಗಿದೆ ಎಂದು ದೂರುದಾರ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.
ರೈತ ವಿರೋಧಿ ಕ್ರಮ: ರೈತರ ಪರಿಹಾರ ಧನ ನೀಡದೆ 6 ಮೀಟರ್ ಎತ್ತರಕ್ಕೆ ನೀರು ಸಂಗ್ರಹಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿರುವುದು ರೈತ ವಿರೋಧಿ ಕ್ರಮ ಎಂದು ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿತ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಎನ್.ಕೆ. ಇದ್ದಿನಬ್ಬ ರೈತ ಸಂಘದ ಕಾರ್ಯದರ್ಶಿ ಮನೋಹರ ಶೆಟ್ಟಿ , ಸುದೇಶ್ ಮಯ್ಯ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರಿಗೆ ನ್ಯಾಯೋಚಿತ ಪರಿಹಾರ ಒದಗಿಸಿ ಹಿತಾಸಕ್ತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.







