ಉಡುಪಿ: ಜನನ-ಮರಣ ನೋಂದಣಿಗೆ ಸೂಚನೆ
ಉಡುಪಿ, ಜ.12: ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸಂಭವಿಸುವ ಜನನ ಮರಣ ಘಟನೆಗಳನ್ನು ನೋಂದಣಿ ಮಾಡಿ ಪ್ರತಿ ತಿಂಗಳ ಐದರೊಳಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಗೆ ತಾಲೂಕುಗಳಿಂದ ಕ್ರೂಢೀಕೃತ ವರದಿ ಸಲ್ಲಿಸಿ ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಜನನ ಮರಣ ಸಮನ್ವಯ ಸಮಿತಿಯ ಅಧ್ಯಕ್ಷರಾದ ಅನುರಾಧ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಜನನ ಮರಣ ಸಮನ್ವಯ ಸಮಿತಿ ಸಭೆಯನ್ನುದ್ದೇಶಿ ಅವರು ಮಾತನಾಡಿದರು. ಸಂಬಂಧಪಟ್ಟ ನೋಂದಣಿ ಹಾಗೂ ಉಪನೋಂದಣಿ ಘಟಕಗಳು ಪ್ರತಿ ತಿಂಗಳ ಐದರೊಳಗೆ ಜನನ ಮರಣ ನೋಂದಣಿಯ ಮಾಸಿಕ ವರದಿಯನ್ನು ಕಡ್ಡಾಯವಾಗಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದರು.
2017ರ ಜನವರಿಯಿಂದ ನವೆಂಬರ್‌ವರೆಗೆ ಜನನ ಮರಣಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 1,191 ಜನನ ಹಾಗೂ 5,408 ಮರಣ, ಪಟ್ಟಣ ಪ್ರದೇಶದಲ್ಲಿ 13,353 ಜನನ ಹಾಗೂ 3,782 ಮರಣಗಳು ನೆಂದಾವಣೆ ಯಾಗಿವೆ ಎಂದು ತಿಳಿಸಿದರು.
ಜನನ ಮರಣ ನೋಂದಣಿ ಬಗ್ಗೆ ನೋಂದಣಾಧಿಕಾರಿಗಳು, ಉಪ ನೋಂದಣಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯ ಕರ್ತೆಯರಿಗೆ ತರಬೇತಿ ನೀಡಲು ಸಭಾಧ್ಯಕ್ಷರು ಸೂಚಿಸಿದರು.





