ಹನೂರು: ಸ್ವಾಮಿ ವಿವೇಕಾನಂದರ 155 ನೇ ಜಯಂತಿ ಆಚರಣೆ
ಹನೂರು,ಜ.12: ಪ್ರಬುದ್ಧ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಸ್ವಾಮಿ ವಿವೇಕಾನಂದರ ಪಾತ್ರ ಹಿರಿದು. ಆಗಾಗಿ ಪ್ರತಿಯೊಬ್ಬರೂ ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಳ್ಳೇಗಾಲ ನ್ಯಾಯಾಲಯದ ಸರ್ಕಾರಿ ಸಹಾಯಕ ಅಭಿಯೋಜಕ ಎಂ.ನಾಗೇಶ್ ತಿಳಿಸಿದರು.
ಪಟ್ಟಣದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 155ನೇ ಜಯಂತಿ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ತನ್ನದೇ ಆದ ಐತಿಹಾಸಿಕ ಹಿನ್ನಲೆಯನ್ನು ಹೊಂದಿದ್ದು, ಆಚಾರ, ವಿಚಾರ, ಸಂಪ್ರದಾಯ, ಸಂಸ್ಕೃತಿ ವಿಚಾರದಲ್ಲಿ ಮಹತ್ವವನ್ನು ಪಡೆದಿದೆ. ಇಲ್ಲಿನ ಸಂಸ್ಕೃತಿ ಆಚರಣೆ ಬೇರೆ ಯಾವ ದೇಶದಲ್ಲೂ ಸಹ ಇಲ್ಲ. ಹೀಗಾಗಿ ವಿದೇಶಿಯರು ದೇಶದ ಸಂಸ್ಕೃತಿ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದು, ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಇದಕ್ಕೆ ಮುಖ್ಯ ಕಾರಣ ಸ್ವಾಮಿ ವಿವೇಕಾನಂದರು. ಅವರು ದೇಶದ ಸಂಸ್ಕೃತಿಯನ್ನು ಉತ್ತುಂಗಕ್ಕೇರಿಸುವುದರ ಮೂಲಕ ದೇಶದ ಜನರಲ್ಲಿ ಭಾವಕ್ಯತೆಯ ಬೇರಿಗೆ ಭದ್ರ ಬುನಾದಿ ಹಾಕಿದರು. ಚಿಕ್ಕ ವಯಸ್ಸಿನಲ್ಲಿಯೇ ದೇಶದಲ್ಲಿನ ಸವಾಲುಗಳನ್ನು ಎದುರಿಸಿ ಉತ್ತಮ ದೇಶ ನಿರ್ಮಾಣ ಮಾಡಲು ಪಣ ತೊಟ್ಟರು. ಈ ನಿಟ್ಟಿನಲ್ಲಿ ದೇಶಕ್ಕೆ ತಮ್ಮದೇ ಆದ ಸೇವೆಯನು ಸಲ್ಲಿಸಿದ್ದಾರೆ. ಆದುದರಿಂದ ಪ್ರತಿಯೊಬ್ಬರೂ ಸ್ವಾಮಿ ವಿವೇಕಾನಂದರ ವಿಚಾರಧಾರೆ, ಕಲ್ಪನೆ ಹಾಗೂ ಜೀವನ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಮಧುಸೂದನ್ ಮಾತನಾಡಿ, ಸ್ವಾಮಿ ವಿವೇಕಾನಂದರು ಇಡೀ ಜಗತ್ತನ್ನೇ ದೇಶದತ್ತ ಸೆಳೆಯಲು ಕಾರಣರಾದ ಆಧ್ಯಾತ್ಮ ಚೇತನ. ಇವರು ಯುವಕರಲ್ಲಿ ದೇಶ ಪ್ರೇಮವನ್ನು ಮೂಡಿಸುವುದರ ಮೂಲಕ ಸದೃಢ ರಾಷ್ಟ್ರ ನಿರ್ಮಿಸಲು ಪಣತೊಟ್ಟ ಅಪ್ಪಟ ದೇಶಪ್ರೇಮಿ. ಜತೆಗೆ ಉತ್ತಮ ಸಮಾಜ ನಿರ್ಮಿಸಲು ಕನಸನ್ನು ಹೊತ್ತು ದೇಶದ ಜನರಿಗೆ ಕರೆ ನೀಡಿದ್ದ ಆಧ್ಯಾತ್ಮಕ ಚಿಂತಕ. ಆದ್ದರಿಂದ ಸ್ವಾಮಿ ವಿವೇಕಾನಂದರ ಕನಸನ್ನು ನನಸು ಮಾಡುವುದು ನಮ್ಮೆಲ್ಲರ ಜಾವಬ್ದಾರಿ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವನ್ನು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಈ ವೇಳೆ ಸ್ವಾಮಿ ವಿವೇಕಾನಂದರ ವೇಷ ಧರಿಸಿದ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಸವರಾಜು, ವಕೀಲ ರಾಧಕೃಷ್ಣ, ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಉಮಾ, ಸಂಚಾಲಕ ರಾಜೇಂದ್ರ, ಕಾರ್ಯದರ್ಶಿ ಸುರೇಶ್‍ನಾಯ್ಡು, ಪ್ರಾಂಶುಪಾಲ ಮಧುಸೂದನ್, ಮುಖ್ಯಶಿಕ್ಷಕಿ ಸತ್ಯಪ್ರಿಯ, ಇನ್ಸ್ ಪೆಕ್ಟರ್ ಪರಶುರಾಮ್ ಹಾಗೂ ಇನ್ನಿತರರಿದ್ದರು.