ಯುದ್ಧ ಸಮಯದಲ್ಲಿ ಶೋಷಿತ ಮಹಿಳೆಯರಿಗೆ ಹೆಚ್ಚಿನ ನೆರವು ನೀಡಲು ನಿರಾಕರಿಸಿದ ಜಪಾನ್

ಸಿಯೋಲ್ (ದ.ಕೊರಿಯ),ಜ.12: ಯುದ್ಧ ಸಮಯದಲ್ಲಿ ಜಪಾನ್‌ನ ವೇಶ್ಯಾಗೃಹಗಳಲ್ಲಿ ಒತ್ತಾಯಪೂರ್ವಕವಾಗಿ ದುಡಿಸಲ್ಪಟ್ಟ ದಕ್ಷಿಣ ಕೊರಿಯಾದ ಮಹಿಳೆಯರಿಗೆ ಹೆಚ್ಚಿನ ನೆರವನ್ನು ನೀಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ದ. ಕೊರಿಯದ ಬೇಡಿಕೆಯನ್ನು ಶುಕ್ರವಾರದಂದು ಜಪಾನ್ ಪ್ರಧಾನಿ ಶಿಂಝೋ ಅಬೆ ತಿರಸ್ಕರಿಸಿದ್ದಾರೆ ಮತ್ತು ಎರಡು ದೇಶಗಳ ಮಧ್ಯೆ 2015ರಲ್ಲಿ ಮಾಡಲ್ಪಟ್ಟ ಒಪ್ಪಂದವನ್ನು ಗೌರವಿಸುವಂತೆ ಅವರು ತಿಳಿಸಿದ್ದಾರೆ.
1910-45ರ ಸಮಯದಲ್ಲಿ ಜಪಾನ್‌ನ ವಸಾಹತುಶಾಹಿತ್ವ ಮತ್ತು ದಕ್ಷಿಣ ಕೊರಿಯದ ಮಹಿಳೆಯರನ್ನು ವೇಶ್ಯಾಗೃಹಕ್ಕೆ ತಳ್ಳಿದ ಘಟನೆಗಳ ಕಾರಣದಿಂದ ಎರಡು ದೇಶಗಳ ಮಧ್ಯೆ ಸಂಬಂಧವು ಉತ್ತಮವಾಗಿಲ್ಲ. 2015ರಲ್ಲಿ ಸಹಿ ಹಾಕಲ್ಪಟ್ಟ ಒಪ್ಪಂದವು ಸಂತ್ರಸ್ತರ ಅಗತ್ಯಗಳನ್ನು ಪೂರೈಸುವಲ್ಲಿ ಮತ್ತು ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ದಕ್ಷಿಣ ಕೊರಿಯ ತಿಳಿಸಿದೆ. ಇನ್ನೊಂದೆಡೆ, ಈ ಒಪ್ಪಂದವು ಎರಡು ದೇಶಗಳ ಮಧ್ಯೆ ಮಾಡಲ್ಪಟ್ಟ ಪ್ರತಿಜ್ಞೆಯಾಗಿದೆ. ಈ ಪ್ರತಿಜ್ಞೆಯನ್ನು ಕಾಪಾಡುವುದು ಅಂತಾರಾಷ್ಟ್ರೀಯ ಮತ್ತು ಜಾಗತಿಕ ಸತ್ಯವಾಗಿದೆ. ಹಾಗಾಗಿ ಹೆಚ್ಚಿನ ನೆರವು ಬೇಕೆಂದು ದಕ್ಷಿಣ ಕೊರಿಯ ಮಾಡುತ್ತಿರುವ ಏಕಪಕ್ಷೀಯ ಆಗ್ರಹವನ್ನು ನಾವು ಒಪ್ಪಿಕೊಳ್ಳುವಂತಿಲ್ಲ ಎಂದು ಜಪಾನ್ ತಿಳಿಸಿದೆ.
ಈ ಒಪ್ಪಂದದಂತೆ ಜಪಾನ್ ಕ್ಷಮೆ ಕೇಳಿದ್ದು ಸಂತ್ರಸ್ತ ಮಹಿಳೆಯರ ನೆರವಿಗಾಗಿ ಒಂದು ಬಿಲಿಯನ್ ಯೆನ್ ನೀಡುವುದಾಗಿ ಭರವಸೆ ನೀಡಿದೆ. ಆದರೆ ದಕ್ಷಿಣ ಕೊರಿಯ ಮಾತ್ರ ಈ ಕ್ರಮ ಸಾಕಾಗುವುದಿಲ್ಲ ಜಪಾನ್ ಇನ್ನೂ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಇನ್ನೊಮ್ಮೆ ಕ್ಷಮೆ ಕೇಳಬೇಕು ಎಂದು ಬೇಡಿಕೆಯಿಟ್ಟಿದೆ.
ಈ ವಿವಾದದ ಕಾರಣದಿಂದ ಮುಂದಿನ ತಿಂಗಳು ದಕ್ಷಿಣ ಕೊರಿಯದ ಪ್ಯೋನ್‌ಚಾಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಶಿಂರೊ ಅಬೆ ಅವರು ಭಾಗವಹಿಸುವುದಿಲ್ಲ ಎಂದು ಜಪನೀಸ್ ಮಾಧ್ಯಮಗಳು ವರದಿ ಮಾಡಿವೆ. ಆದರೆ ಸದ್ಯ ಈ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಸರಕಾರಿ ವಕ್ತಾರರು ತಿಳಿಸಿರುವುದಾಗಿಯೂ ಮಾಧ್ಯಮಗಳು ವರದಿ ಮಾಡಿವೆ.







