ಉತ್ತರ ಪ್ರದೇಶದಲ್ಲಿ ಪದ್ಮಾವತ್ ಚಿತ್ರಕ್ಕೆ ಗ್ರೀನ್ ಸಿಗ್ನಲ್

ಹೊಸದಿಲ್ಲಿ, ಜ. 13: ಸೆನ್ಸಾರ್ ಮಂಡಳಿ ಒಪ್ಪಿಗೆ ನೀಡಿದ ಬಳಿಕವೂ ಬಿಜೆಪಿ ಆಳ್ವಿಕೆಯ ಗುಜರಾತ್ ಹಾಗೂ ಮಧ್ಯಪ್ರದೇಶ, ವಿವಾದಾತ್ಮಕ ಚಿತ್ರ ಪದ್ಮಾವತ್ ಪ್ರದರ್ಶನಕ್ಕೆ ತಡೆ ಮುಂದುವರಿಸಿವೆ. ಆದರೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ, ಈ ಚಿತ್ರ ಬಿಡುಗಡೆಗೆ ತಮ್ಮ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಜನವರಿ 25ರಂದು ಬಿಡುಗಡೆಯಾಗಲಿರುವ ದೀಪಿಕಾ ಪಡುಕೋಣೆ ನಾಯಕಿ ನಟಿಯಾಗಿರುವ ಚಿತ್ರದ ಪ್ರದರ್ಶನಕ್ಕೆ ತಮ್ಮ ರಾಜ್ಯದಲ್ಲಿ ಅವಕಾಶವಿಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ವಸುಂಧರ ರಾಜೇ ಸ್ಪಷ್ಟಪಡಿಸಿದ್ದಾರೆ. ಇತಿಹಾಸ ತಿರುಚಲಾಗಿದೆ ಎಂದು ಆಪಾದಿಸಿ ಕರ್ಣಿ ಸೇನಾ ಬೃಹತ್ ಪ್ರತಿಭಟನೆ ನಡೆಸಿದ್ದರಿಂದ ಚಿತ್ರ ಬಿಡುಗಡೆ ವಿಳಂಬವಾಗಿತ್ತು.
ಸಿಬಿಎಫ್ಸಿ ನಿರ್ದೇಶನದ ಅನ್ವಯ ಬದಲಾವಣೆಗಳು ಹಾಗೂ ಪರಿಷ್ಕರಣೆ ಮಾಡಿದ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನಕ್ಕೆ ಒಪ್ಪಿಗೆ ನೀಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ಹೇಳಿವೆ. ಆದರೆ ಗುಜರಾತ್ನಲ್ಲಿ ಈ ಚಿತ್ರ ಪ್ರದರ್ಶನಕ್ಕೆ ಹೇರಿದ್ದ ನಿಷೇಧ ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ವಿಜಯ್ ರುಪಾನಿ ಸ್ಪಷ್ಟಪಡಿಸಿದ್ದಾರೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕೂಡಾ ನಿಷೇಧ ಮುಂದುವರಿಸಲು ನಿರ್ಧರಿಸಿದ್ದಾರೆ.