52ರ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ: 25ರ ಟೆಕ್ಕಿ ಬಂಧನ

ಹೊಸದಿಲ್ಲಿ, ಜ. 13: ಇಲ್ಲಿನ ತಾಜ್ ಡಿಪ್ಲೊಮ್ಯಾಟಿಕ್ ಎನ್ಕ್ಲೇವ್ ಪಂಚತಾರಾ ಹೋಟೆಲ್ನಲ್ಲಿ 52 ವರ್ಷದ ಅಮೆರಿಕನ್ ಮಹಿಳೆಯೊಬ್ಬರಿಗೆ ಪಾನೀಯದಲ್ಲಿ ಮತ್ತು ಬರಿಸುವ ವಸ್ತು ಮಿಶ್ರಮಾಡಿ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅನಿವಾಸಿ ಭಾರತೀಯ ಟೆಕ್ಕಿಯೊಬ್ಬನನ್ನು ಬಂಧಿಸಲಾಗಿದೆ.
ಆರೋಪಿ ವಿರುದ್ಧ ಚಾಣಕ್ಯಪುರಿ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲಾಗಿದೆ. ಜನವರಿ 6ರಂದು ಮಹಿಳೆ ಭಾರತಕ್ಕೆ ಆಗಮಿಸಿದ್ದು, ಜನವರಿ 8ರಂದು ಆರೋಪಿ ಆಕೆಯನ್ನು ಭೇಟಿ ಮಾಡಿದ್ದಾನೆ. ಹೋಟೆಲ್ನಲ್ಲೇ ವಾಸ್ತವ್ಯ ಇದ್ದ ಈತ ಪಾನಗೋಷ್ಠಿಗಾಗಿ ತನ್ನ ಕೊಠಡಿಗೆ ಆಹ್ವಾನಿಸಿದ್ದ. ಮದ್ಯದಲ್ಲಿ ಮತ್ತು ಬರಿಸುವ ವಸ್ತುವನ್ನು ಸೇರಿಸಿ, ತನ್ನನ್ನು ತಬ್ಬಿಕೊಳ್ಳಲು ಮುಂದಾದ. ಆದರೆ ಆತನನ್ನು ಪಕ್ಕಕ್ಕೆ ತಳ್ಳಿ ಕೊಠಡಿಯಿಂದ ಹೊರಬಂದದ್ದಾಗಿ ಮಹಿಳೆ ದೂರು ನೀಡಿದ್ದಾರೆ.
ಆರೋಪಿ ಟೆಕ್ಕಿ ಜಾಗತಿಕ ಐಟಿ ಕಂಪನಿಯ ಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ವ್ಯವಹಾರ ನಿಮಿತ್ತ ಭಾರತಕ್ಕೆ ಆಗಮಿಸಿದ್ದ ಟೆಕ್ಕಿ, ಹೋಟೆಲ್ನ ಎಂಟನೇ ಮಹಡಿಯಲ್ಲಿ ಕೊಠಡಿ ಪಡೆದಿದ್ದ. ಈ ಘಟನೆ ಬಳಿಕ ಮಹಿಳೆ ಹೋಟೆಲ್ ಖಾಲಿ ಮಾಡಿ ಪಕ್ಕದ ಮತ್ತೊಂದು ಹೋಟೆಲ್ಗೆ ಹೋಗಿದ್ದಾರೆ. ಬಳಿಕ ದೂರು ನೀಡಿದ್ದಾಗಿ ಪೊಲೀಸರು ವಿವರಿಸಿದ್ದಾರೆ.
ಮಹಿಳೆಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ್ದಕ್ಕಾಗಿ ಹಾಗೂ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ಹೇಳಿದ್ದಾರೆ.