ನಾಲ್ವರು ಹಿರಿಯರು ಸಿಡಿದೇಳಲು ಕಾರಣವಾದ ಕಿರಿಯ ನ್ಯಾಯಮೂರ್ತಿ ಯಾರು ?
ಹಿರಿಯರನ್ನು ಕಡೆಗಣಿಸಿ ಇವರಿಗೆ ಸಿಕ್ಕಿದ್ದವು ಮಹತ್ವದ ಕೇಸುಗಳು

ನ್ಯಾ. ಅರುಣ್ ಮಿಶ್ರಾ
ಹೊಸದಿಲ್ಲಿ,ಜ.13 : ಸುಪ್ರೀಂ ಕೋರ್ಟಿನ ನಾಲ್ಕು ಮಂದಿ ಶುಕ್ರವಾರ ಸಿಡಿದೆದ್ದಿದ್ದಾರೆ. ತಮ್ಮ ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ಆಲಿಸಲು ಸಿದ್ಧರಿಲ್ಲ, ದೇಶದ ಪ್ರಜಾತಂತ್ರಕ್ಕೆ ಅಪಾಯವಿದೆ ಎಂದು ಅವರು ಹೇಳಿದ್ದರು. ಹಿರಿಯ ನ್ಯಾಯಮೂರ್ತಿಗಳನ್ನು ಕಡೆಗಣಿಸಿ ಸುಪ್ರೀಂ ಕೋರ್ಟಿನ ಕಿರಿಯ ನ್ಯಾಯಮೂರ್ತಿಯೊಬ್ಬರಿಗೆ ಹಲವು ಪ್ರಮುಖ ಪ್ರಕರಣಗಳನ್ನು ವಹಿಸಲಾಗಿತ್ತು. ಇದೇ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸಿಡಿದೇಳಲು ಕಾರಣ. ಸುಪ್ರೀಂ ಕೋರ್ಟಿನ ಅತ್ಯಂತ ಹಿರಿಯ ನ್ಯಾಯಾಧೀಶರ ಪೈಕಿ ಹತ್ತನೆಯವರಾಗಿರುವ ನ್ಯಾ. ಅರುಣ್ ಮಿಶ್ರಾರಿಗೆ ಆರಂಭದಿಂದಲೂ ಹಲವು ಪ್ರಮುಖ ಕೇಸುಗಳನ್ನು ನೀಡಲಾಗಿತ್ತು. ಮೆಡಿಕಲ್ ಪ್ರವೇಶಾತಿ ಪ್ರಕರಣದಲ್ಲಿ ನ್ಯಾ. ಅರುಣ್ ಮಿಶ್ರಾರನ್ನು ಸಾಂವಿಧಾನಿಕ ಪೀಠದ ಭಾಗವನ್ನಾಗಿಸಲಾಗಿತ್ತಲ್ಲದೆ ಅವರನ್ನೊಳಗೊಂಡ ತ್ರಿಸದಸ್ಯರ ಪೀಠವು ಈ ಪ್ರಕರಣದಲ್ಲಿ ನ್ಯಾಯಾಂಗ ತನಿಖೆಯ ಕೋರಿಕೆಯನ್ನು ರದ್ದುಗೊಳಿಸಿತ್ತು.
ಸಹಾರ-ಬಿರ್ಲಾ ಪ್ರಕರಣದಲ್ಲಿ ತನಿಖೆ ಕೋರಿ ಸಲ್ಲಿಸಲಾಗಿದ್ದ ಅಪೀಲನ್ನು ಜಸ್ಟಿಸ್ ಅರುಣ್ ಮಿಶ್ರಾ ಹಾಗೂ ಅಮಿತಾವ ರಾಯ್ ಅವರಿದ್ಧ ಪೀಠ ವಿಚಾರಣೆ ನಡೆಸಿ ಈ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಹೇಳಿತ್ತು.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ತಾವುಗಳಿಲ್ಲದ ಪೀಠ ರಚಿಸಿ ಅವುಗಳನ್ನು ಬೇರೆ ಕಿರಿಯ ನ್ಯಾಯಾಧೀಶರಿಗೆ ವಹಿಸುತ್ತಿದ್ದಾರೆ ಎಂದು ಶುಕ್ರವಾರ ಸುಪ್ರೀಂ ಕೋರ್ಟಿ ನಾಲ್ಕು ಮಂದಿ ಅತ್ಯಂತ ಹಿರಿಯ ನ್ಯಾಯಾಧೀಶರುಗಳಾದ ಜಸ್ಟಿಸ್ ಜೆ ಚೆಲಮೇಶ್ವರ್, ಜಸ್ಟಿಸ್ ರಂಜನ್ ಗೋಗೊಯಿ, ಜಸ್ಟಿಸ್ ಮದನ್ ಲೋಕೂರ್ ಹಾಗೂ ಜಸ್ಟಿಸ್ ಕುರಿಯನ್ ಜೋಸೆಫ್ ಆರೋಪಿಸಿದ್ದರು.
ಈ ವಾರದ ಆರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಏರ್ ಸೆಲ್-ಮ್ಯಾಕ್ಸಿಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಚಿದಂಬರಂ ಅವರ ಪುತ್ರ ಕಾರ್ತಿ ಸುಬ್ರಹ್ಮಣ್ಯಂ ಆಸ್ತಿ ಮುಟ್ಟುಗೋಲು ಸಂಬಂಧಿಸಿದ ಪ್ರಕರಣದಿಂದ ಹಿಂದೆ ಸರಿದು ಜಸ್ಟಿಸ್ ಅರುಣ್ ಮಿಶ್ರಾ ನೇತೃತ್ವದ ಪೀಠಕ್ಕೆ ವಹಿಸಿದ್ದರು
ಜಸ್ಟಿಸ್ ಅರುಣ್ ಮಿಶ್ರಾ- ಯಾರಿವರು ?
ಜಸ್ಟಿಸ್ ಅರುಣ್ ಮಿಶ್ರಾ ಅವರು ಸುಪ್ರೀಂ ಕೋರ್ಟಿನಲ್ಲಿ ಜ್ಯೇಷ್ಠತೆಯಲ್ಲಿ 10ನೇ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದರೂ ಅವರಿಗಿಂತ ಹಿರಿಯರನ್ನು ಕಡೆಗಣಿಸಿ ಇವರಿಗೆ ಮಹತ್ವದ ಪ್ರಕರಣಗಳ ಮೇಲಿನ ವಿಚಾರಣೆಯನ್ನು ವಹಿಸಲಾಗುತ್ತಿತ್ತು. ಅವರಿಗೆ ವಿಚಾರಣೆ ನಡೆಸಲು ವಹಿಸಲಾದ ಲೇಟೆಸ್ಟ್ ಪ್ರಕರಣ ಜಸ್ಟಿಸ್ ಬಿ ಎಚ್ ಲೋಯಾ ಪ್ರಕರಣವಾಗಿದೆ. ಖಾಸಗಿ ಮೆಡಿಕಲ್ ಕಾಲೇಜು ಪ್ರವೇಶಾತಿ ಹಗರಣ ಹಾಗೂ ಸಹಾರ-ಬಿರ್ಲಾ ಡೈರಿ ಹಗರಣದ ವಿಚಾರಣೆಯನ್ನೂ ಅವರೇ ನಿರ್ವಹಿಸುತ್ತಿದ್ದಾರೆ. ಹದಿನೈದು ವರ್ಷಗಳ ಕಾಲ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಮಿಶ್ರಾ ಅವರನ್ನು 2014ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿತ್ತು. ಅವರ ಸೇವಾವಧಿ ಸೆಪ್ಟೆಂಬರ್ 2020ರಲ್ಲಿ ಕೊನೆಗೊಳ್ಳಲಿದೆ.