5 ಸಾವಿರ ಕೋ. ರೂ. ವಂಚನೆ : ಆಂಧ್ರ ಬ್ಯಾಂಕ್ನ ಮಾಜಿ ಅಧಿಕಾರಿ ಬಂಧನ

ಹೊಸದಿಲ್ಲಿ, ಜ. 13: ಗುಜರಾತ್ ಮೂಲದ ಫಾರ್ಮಾಸ್ಯೂಟಿಕಲ್ ಕಂಪೆನಿ ಬಯೋಟೆಕ್ ಭಾಗಿಯಾಗಿರುವ 5,000 ಕೋ. ರೂ. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಆಂಧ್ರ ಬ್ಯಾಂಕ್ನ ಮಾಜಿ ನಿರ್ದೇಶಕರನ್ನು ಬಂಧಿಸಿದೆ.
ಒಂದು ದಿನ ಪೂರ್ತಿ ವಿಚಾರಣೆ ನಡೆಸಿದ ಬಳಿಕ ಕಪ್ಪು ಹಣ ಬಿಳುಪು ತಡೆ ಕಾಯ್ದೆ ಅಡಿಯಲ್ಲಿ ಅನೂಪ್ ಪ್ರಕಾಶ್ ಗರ್ಗ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾವು ದಾಖಲಿಸಿದ ಕ್ರಿಮಿನಲ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಗರ್ಗ್ ಅವರನ್ನು ಆರೋಪಿ ಎಂದು ಪರಿಗಣಿಸಿತ್ತು. ಪ್ರಕರಣದ ಕುರಿತ ಸಿಬಿಐ ಪ್ರಥಮ ಮಾಹಿತಿ ವರದಿಯನ್ನು ಗಮನಿಸಿ ಜಾರಿ ನಿರ್ದೇಶನಾಲಯ ಕಪ್ಪು ಹಣ ಬಿಳುಪು ಮಾಡಿರುವ ಕುರಿತು ತನಿಖೆ ಆರಂಭಿಸಿತ್ತು.
2011ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ಸಂದರ್ಭ ವಶಪಡಿಸಿಕೊಳ್ಳಲಾದ ಡೈರಿಯಲ್ಲಿ 2008-09ರ ನಡುವೆ ಆಂಧ್ರ ಬ್ಯಾಂಕ್ ನಿರ್ದೇಶಕ ಗರ್ಗ್ಗೆ ಒಟ್ಟು 1.52 ಕೋ. ರೂ. ಮೊತ್ತವನ್ನು ವಿವಿಧ ಸಂದರ್ಭ ನಗದು ಪಾವತಿ ಮಾಡಿರುವ ಬಗ್ಗೆ ನಿರ್ದಿಷ್ಟ ದಾಖಲು ಪತ್ತೆಯಾಗಿತ್ತು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.