ನ್ಯಾಯಾಂಗ, ನ್ಯಾಯದ ಹಿತದೃಷ್ಟಿಯಂತೆ ನಡೆದುಕೊಂಡಿದ್ದೇನೆ: ಕುರಿಯನ್ ಜೋಸೆಫ್

ಕೊಚ್ಚಿ, ಜ.13: ದೇಶದ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣಗಳನ್ನು ‘ಆಯ್ದು’ ಹಂಚುತ್ತಾರೆ ಹಾಗೂ ಇತರ ಹಲವು ನ್ಯಾಯಾಂಗ ಸಂಬಂಧಿ ಲೋಪಗಳು ನಡೆಯುತ್ತಿವೆ ಎಂದು ಆರೋಪಿಸಿ ಅವರ ವಿರುದ್ಧ ಬಂಡಾಯ ಎದ್ದಿರುವ ಸರ್ವೋಚ್ಚ ನ್ಯಾಯಾಲಯದ ನಾಲ್ಕು ಹಿರಿಯ ನ್ಯಾಯಾಧೀಶರುಗಳ ಪೈಕಿ ಒಬ್ಬರಾಗಿರುವ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಈ ವಿಷಯವು ಶೀಘ್ರವೇ ಪರಿಹಾರವಾಗುವುದು ಎಂಬ ವಿಶ್ವಾಸವನ್ನು ಶನಿವಾರ ವ್ಯಕ್ತಪಡಿಸಿದ್ದಾರೆ.
ನಾವು ಕೇವಲ ನ್ಯಾಯಾಂಗ ಮತ್ತು ನ್ಯಾಯದ ಹಿತದೃಷ್ಟಿಯಿಂದ ಈ ಹೆಜ್ಜೆಯನ್ನು ಇಡಬೇಕಾಯಿತು ಎಂದು ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಮಾಧ್ಯಮಗೋಷ್ಟಿ ಕರೆದ ಮರುದಿನ ಕುರಿಯನ್ ಅವರು ಕೇರಳದ ಕಲಡಿಯಲ್ಲಿರುವ ತಮ್ಮ ನಿವಾಸದಲ್ಲಿ ಸ್ಥಳೀಯ ಪತ್ರಿಕೆಗಳಿಗೆ ತಿಳಿಸಿದ್ದಾರೆ.
ನಾವು ನ್ಯಾಯಾಂಗ ಮತ್ತು ನ್ಯಾಯದ ಪರ ನಿಂತಿದ್ದೇವೆ. ಅದನ್ನೇ ನಾವು ದಿಲ್ಲಿಯಲ್ಲೂ ಹೇಳಿದ್ದೇವೆ. ಅದಕ್ಕಿಂತ ಹೆಚ್ಚು ಬೇರೇನೂ ಇಲ್ಲ. ಈ ಸಮಸ್ಯೆ ಶೀಘ್ರ ಪರಿಹಾರವಾಗಲಿದೆ ಎಂಬ ನಂಬಿಕೆ ನನಗಿದೆ. ಜನರಿಗೆ ನ್ಯಾಯಾಂಗದ ಮೇಲಿರುವ ನಂಬಿಕೆಯನ್ನು ಅಧಿಕಗೊಳಿಸುವುದೇ ನಮ್ಮ ಉದ್ದೇಶವಾಗಿದೆ ಎಂದು ಕುರಿಯನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಾಧೀಶರುಗಳಾದ ನ್ಯಾಯಮೂರ್ತಿ ಜೆ. ಚಲಮೇಶ್ವರ, ರಂಜನ್ ಗೊಗೊಯ್, ಎಂ.ಬಿ. ಲೊಕೂರ್ ಮತ್ತು ಕುರಿಯನ್ ಜೋಸೆಫ್ ಶುಕ್ರವಾರದಂದು ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಟಿಯನ್ನು ಕರೆದಿದ್ದರು. ಸರ್ವೋಚ್ಚ ನ್ಯಾಯಾಲಯದಲ್ಲಿ ಎಲ್ಲವೂ ಸರಿಯಾಗಿಲ್ಲ ಮತ್ತು ಕಡಿಮೆ ಅರ್ಹತೆಯ ಘಟನೆಗಳು ಅಲ್ಲಿ ನಡೆಯುತ್ತಿರುವುದಾಗಿ ಅವರು ಆರೋಪಿಸಿದ್ದರು. ನ್ಯಾಯಾಂಗವನ್ನು ರಕ್ಷಿಸದೆ ಹೋದರೆ ಈ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದವರು ಎಚ್ಚರಿಸಿದ್ದರು.
ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅವರು ಆರೋಪಿಸಿದ್ದರು.