ಕಿವೀಸ್ ಶುಭಾರಂಭ, ಪಾಕ್ ಗೆ ಅಫ್ಘಾನ್ ಶಾಕ್
ಅಂಡರ್-19 ಕ್ರಿಕೆಟ್ ವಿಶ್ವಕಪ್

ವೆಲ್ಲಿಂಗ್ಟನ್, ಜ.13: ಬಹುನಿರೀಕ್ಷಿತ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನ ಮೊದಲ ದಿನವಾದ ಶನಿವಾರ ಆತಿಥೇಯ ನ್ಯೂಝಿಲೆಂಡ್ ಶುಭಾರಂಭ ಮಾಡಿದ್ದರೆ, ಪಾಕಿಸ್ತಾನದ ಅಂಡರ್-19 ತಂಡ ಅಫ್ಘಾನಿಸ್ತಾನ ವಿರುದ್ಧ ಆಘಾತಕಾರಿ ಸೋಲನುಭವಿಸಿದೆ.
ಕಿವೀಸ್‌ನ 18ರ ಹರೆಯದ ಫಿನ್ ಅಲ್ಲೆನ್ ವಿಂಡೀಸ್ ವಿರುದ್ಧ ಶತಕ ಸಿಡಿಸುವ ಮೂಲಕ ಗಮನ ಸೆಳೆದರು. ‘ಡಿ’ ಗುಂಪಿನ ಪಂದ್ಯದಲ್ಲಿ ಟಾಸ್ ಜಯಿಸಿದ ಪಾಕ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅಫ್ಘಾನ್‌ನ ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿದ ಪಾಕ್ ರೊಹೈಲ್ ನಝೀರ್ ಏಕಾಂಗಿ ಹೋರಾಟದಿಂದಾಗಿ 188 ರನ್ ಗಳಿಸಿತು. ಗೆಲ್ಲಲು 189 ರನ್ ಗುರಿ ಪಡೆದ ಅಫ್ಘಾನ್ ಆರಂಭ ಉತ್ತಮವಾಗಿರಲಿಲ್ಲ. ಆದರೆ ದಾರ್ವಿಶ್ ರಸೂಲಿ(76 ರನ್, 78 ಎಸೆತ) ಅಫ್ಘಾನ್‌ಗೆ 15 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್‌ಗಳ ಗೆಲುವು ತಂದುಕೊಟ್ಟರು.
ಮತ್ತೊಂದು ಪಂದ್ಯದಲ್ಲಿ ನ್ಯೂಝಿಲೆಂಡ್ ಚಾಂಪಿಯನ್ ವಿಂಡೀಸ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 233 ರನ್ ಗಳಿಸಿತು. ಆರಂಭಿಕ ಆಟಗಾರರಾದ ಕೀಗನ್ ಸಿಮೊನ್ಸ್ (ಅಜೇಯ 92) ಹಾಗೂ ಕಿಮಾನಿ ಮೆಲಿಯುಸ್(78) ಮೊದಲ ವಿಕೆಟ್‌ಗೆ 123 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಈ ಇಬ್ಬರು ಔಟಾದ ಬಳಿಕ ವಿಂಡೀಸ್ ಕುಸಿತ ಕಂಡಿತು. 234 ರನ್ ಚೇಸಿಂಗ್ ಮಾಡಿದ ಕಿವೀಸ್‌ಗೆ ಫಿನ್ ಅಲ್ಲೆನ್ ಆಸರೆಯಾದರು. ಫಿನ್ ಕೇವಲ 100 ಎಸೆತಗಳಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಿತ 115 ರನ್ ಗಳಿಸಿದರು. ಫಿನ್‌ಗೆ ಆರಂಭಿಕ ಆಟಗಾರ ಜಾಕಬ್ ಭುಲಾ(83ರನ್) ಉತ್ತಮ ಸಾಥ್ ನೀಡಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಮಳೆಬಾಧಿತ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನಮೀಬಿಯಾ ವಿರುದ್ಧ 87 ರನ್ ಜಯ ದಾಖಲಿಸಿತು. ಮಳೆಯಿಂದಾಗಿ 20 ಓವರ್‌ಗೆ ಕಡಿತಗೊಂಡ ಪಂದ್ಯದಲ್ಲಿ ಬಾಂಗ್ಲಾದೇಶ 190 ರನ್ ಗಳಿಸಿತು. ನಾಯಕ ಸೈಫ್ ಹಸನ್ 48 ಎಸೆತಗಳಲ್ಲಿ 84 ರನ್ ಗಳಿಸಿದರು. ನಮೀಬಿಯಾ 20 ಓವರ್‌ಗಳಲ್ಲಿ 102 ರನ್‌ಗೆ ಆಲೌಟಾಯಿತು.
ಝಿಂಬಾಬ್ವೆ ತಂಡ ಪಪುವಾ ನ್ಯೂ ಗಿನಿ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಮಳೆಯಿಂದಾಗಿ 20 ಓವರ್‌ಗೆ ಕಡಿತಗೊಂಡ ಪಂದ್ಯದಲ್ಲಿ ನ್ಯೂಗಿನಿ ಕೇವಲ 95 ರನ್‌ಗೆ ಆಲೌಟಾಯಿತು. ಝಿಂಬಾಬ್ವೆ 14ನೇ ಓವರ್‌ಗೆ ಗುರಿ ತಲುಪಿತು.







