ಜ.ಅರುಣ್ ಮಿಶ್ರಾರಿಗೆ ಬಿಜೆಪಿ ನಾಯಕರೊಂದಿಗೆ ನಿಕಟ ಸಂಬಂಧವಿದೆ: ಹಿರಿಯ ವಕೀಲ ದುಷ್ಯಂತ್ ದಾವೆ ಆರೋಪ
ನ್ಯಾ.ಲೋಯಾ ಸಾವು ಪ್ರಕರಣ

ಹೊಸದಿಲ್ಲಿ, ಜ.14: ಸುಪ್ರೀಂ ಕೋರ್ಟ್ ನಾಲ್ವರು ನ್ಯಾಯಾಧೀಶರ ಐತಿಹಾಸಿಕ ಸುದ್ದಿಗೋಷ್ಠಿಯ ನಂತರ ಹಿರಿಯ ವಕೀಲ ದುಷ್ಯಂತ್ ದಾವೆ ಅವರು ಲೋಯಾ ಸಾವು ಪ್ರಕರಣದ ವಿಚಾರಣೆಗಾಗಿ ನಿಯೋಜನೆಗೊಂಡಿರುವ ಅರುಣ್ ಮಿಶ್ರಾ ಅವರಿಗೆ ಬಿಜೆಪಿ ಹಾಗು ಪ್ರಮುಖ ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
“ಬಿಜೆಪಿ ಹಾಗು ಪ್ರಮುಖ ರಾಜಕೀಯ ನಾಯಕರೊಂದಿಗೆ ಅರುಣ್ ಮಿಶ್ರಾರಿಗೆ ನಿಕಟ ಸಂಬಂಧವವಿರುವುದು ಎಲ್ಲರಿಗೂ ತಿಳಿದಿದೆ. ನ್ಯಾ. ಲೋಯಾ ಸಾವಿನ ಪ್ರಕರಣವನ್ನು ಅರುಣ್ ಮಿಶ್ರಾರಿಗೆ ವಹಿಸಬಾರದು” ಎಂದು ದಾವೆ ಹೇಳಿರುವುದಾಗಿ ಸಿಎನ್ ಎನ್ ನ್ಯೂಸ್ 18 ವರದಿ ಮಾಡಿದೆ.
ಈ ಪ್ರಕರಣದಲ್ಲಿ ವಾದ ಮಾಡುವುದಾಗಿ ಆರಂಭದಲ್ಲಿ ದುಷ್ಯಂತ್ ದಾವೆ ಒಪ್ಪಿದ್ದರು. ಆದರೆ ಪ್ರಕರಣವನ್ನು ಅರುಣ್ ಮಿಶ್ರಾ ಆಲಿಸುವ ವಿಚಾರ ತಿಳಿದ ನಂತರ ಪ್ರಕರಣವನ್ನು ಹಿಂದೆಗೆದುಕೊಳ್ಳಲು ದಾವೆ ಒತ್ತಾಯಿಸಿದರು. ಸುಪ್ರೀಂ ಕೋರ್ಟ್ ಬದಲಾಗಿ ಬಾಂಬೆ ಹೈಕೋರ್ಟ್ ನ ಮೊರೆ ಹೋಗಬೇಕೆಂದು ದಾವೆ ತಿಳಿಸಿರುವುದಾಗಿಯೂ ಅರ್ಜಿದಾರ ಪೂನಾವಾಲಾ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದಾವೆ, ಅರುಣ್ ಮಿಶ್ರಾ ಅವರಿಗೆ ಬಿಜೆಪಿ ನಾಯಕರೊಂದಿಗೆ ನಿಕಟ ಸಂಬಂಧವಿರುವುದರಿಂದ ಅವರ ಪೀಠದಿಂದ ಪ್ರಕರಣವನ್ನು ಹಿಂಪಡೆಯುವಂತೆ ಸಿಜೆಐ ದೀಪಕ್ ಮಿಶ್ರಾರೊಂದಿಗೆ ಪ್ರಸ್ತಾಪಿಸಬೇಕು ಎಂದು ಪೂನಾವಾಲಾರೊಂದಿಗೆ ಹೇಳಿದ್ದೆ ಎಂದಿದ್ದಾರೆ.