ಅಡ್ವೋಕೇಟ್ ಜನರಲ್ ಸಲಹೆ ನಂತರ ನ್ಯಾ.ಸದಾಶಿವ ವರದಿ ಜಾರಿ: ಸಚಿವ ಎಚ್.ಆಂಜನೇಯ

ಬೆಂಗಳೂರು, ಜ.14: ಪರಿಶಿಷ್ಟರ ಒಳ ಮೀಸಲಾತಿ ವರ್ಗೀಕರಣ ಸಂಬಂಧ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಕುರಿತಂತೆ ರಾಜ್ಯದ ಅಡ್ವೋಕೇಟ್ ಜನರಲ್ ಸಲಹೆ ಪಡೆದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ರವಿವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಸಂಬಂಧ ದಲಿತ ಸಮುದಾಯದ ಸಚಿವರು, ಸಂಸದರು, ಶಾಸಕರೊಂದಿಗೆ ನಡೆದ ಸಭೆಯ ನಂತರ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ದಲಿತ ಶಾಸಕ-ಸಂಸದರ ಅಭಿಪ್ರಾಯಗಳನ್ನು ಸಿಎಂ ಸಿದ್ದರಾಮಯ್ಯ ಆಲಿಸಿದ್ದು, ಶೀಘ್ರದಲ್ಲಿಯೇ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆಂದು ಆಶಿಸಿದರು.
ನ್ಯಾ.ಸದಾಶಿವ ಆಯೋಗದ ವರದಿಗೆ ಸಂಬಂಧಿಸಿದಂತೆ ಇಂದು ನಡೆದ ಸಭೆ ಉತ್ತಮ ವೇದಿಕೆಯಾಗಿತ್ತು. ಚರ್ಚೆಯ ಪ್ರಾರಂಭದಲ್ಲಿಯೇ ಈ ವರದಿಯ ಬಗೆಗಿದ್ದ ಕೆಲವೊಂದು ಗೊಂದಲಗಳನ್ನು ನಿವಾರಿಸಲಾಯಿತು. ಮುಖ್ಯವಾಗಿ ಪರಿಶಿಷ್ಟರ ಪಟ್ಟಿಯಿಂದ ಭೋವಿ ಹಾಗೂ ಲಂಬಾಣಿ ಸಮುದಾಯಗಳನ್ನು ಕೈಬಿಡಲಾಗುತ್ತದೆ ಎಂಬ ಸಂಶಯ ವ್ಯಕ್ತವಾಗಿತ್ತು. ಆದರೆ, ಯಾವುದೇ ಕಾರಣಕ್ಕೂ ಲಂಬಾಣಿ ಹಾಗೂ ಭೋವಿ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ಪ್ರಶ್ನೆಯಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ನ್ಯಾ.ಸದಾಶಿವ ವರದಿ ಜಾರಿಯಿಂದ ಯಾವ ಸಮುದಾಯಕ್ಕೂ ತೊಂದರೆ ಆಗಬಾರದು ಎಂಬುದು ರಾಜ್ಯ ಸರಕಾರದ ಆಶಯ. ಹೀಗಾಗಿ ಹಿಂದಿನ ಸಚಿವ ಸಂಪುಟದಲ್ಲಿ ಈ ವರದಿ ಚರ್ಚೆಗೆ ಬಂದಿತ್ತಾದರೂ, ಯಾವುದೇ ತೀರ್ಮಾನ ಕೈಗೊಳ್ಳದೆ ಮುಂದೂಡಲಾಯಿತು. ಈಗ ದಲಿತ ಸಮುದಾಯದ ನಡುವೆ ಒಮ್ಮತ ಮೂಡಿ ಬಂದಿದ್ದು, ಅಡ್ವೋಕೇಟ್ ಜನರಲ್ ಸಲಹೆ ಮೇರೆಗೆ ಶೀಘ್ರವೇ ಜಾರಿಗೊಳಿಸಲಾವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಲಿದ್ದಾರೆಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಂಸದರಾದ ಕೆ.ಎಚ್.ಮುನಿಯಪ್ಪ, ಚಂದ್ರಪ್ಪ, ಶಾಸಕರಾದ ನರೇಂದ್ರಸ್ವಾಮಿ, ಶಿವಮೂರ್ತಿ ನಾಯ್ಕಾ ಸೇರಿದಂತೆ ಸಮುದಾಯದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ನಾಳೆ ಹೋರಾಟಗಾರರೊಂದಿಗೆ ಸಭೆ
‘ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯ ಬಗ್ಗೆ ರಾಜ್ಯದ ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆದ ಬಳಿಕ ಸಮುದಾಯದ ಮುಖಂಡರೊಂದಿಗೆ ಮತ್ತೊಂದು ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದೆಂದು ಸಿಎಂ ಸಿದ್ದರಾಮಯ್ಯ ಸೂಕ್ತ ಭರವಸೆ ನೀಡಿದ್ದಾರೆ. ಹೀಗಾಗಿ ರಾಜ್ಯ ಸರಕಾರದ ನಿಲುವನ್ನು ಮಾದಿಗ ಸಮುದಾಯದ ನಾಯಕರಿಗೆ ತಿಳಿಸುವ ನಿಟ್ಟಿನಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ಕರೆಯಲಾಗಿದೆ’
-ಎಚ್.ಆಂಜನೇಯ ಸಮಾಜ ಕಲ್ಯಾಣ ಸಚಿವ







