ರಾಜಕಾರಣಿಗಳಿಂದ ಕಾರ್ಪೋರೇಟ್ ಕಂಪೆನಿಗಳಿಗೆ ಭೂದಾನ: ಎಚ್.ಎಸ್ ದೊರೆಸ್ವಾಮಿ ಆರೋಪ

ಬೆಂಗಳೂರು, ಜ. 14: ಕೊಟ್ಟ ಭರವಸೆಗಳನ್ನು ಈಡೇರಿಸದ ರಾಜಕಾರಣಿಗಳು ಪ್ರಜಾಪ್ರಭುತ್ವದಲ್ಲಿ ಉದ್ಧಟತನ ಮಾಡುತ್ತಿದ್ದಾರೆ. ಬಡವರಿಗೆ ಸಣ್ಣ ಮನೆ ನೀಡಲು ಸರಕಾರಕ್ಕೆ ಸಾಧ್ಯ ವಾಗುತ್ತಿಲ್ಲ. ಆದರೆ, ಕಾರ್ಪೋರೆಟ್ ಕಂಪೆನಿಗಳಿಗೆ ಸರಕಾರದ ಭೂಮಿಗಳನ್ನು ಧಾರೆ ಎರೆಯುತ್ತಿದ್ದಾರೆಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆರೋಪಿಸಿದ್ದಾರೆ.
ರವಿವಾರ ನಗರದ ಗಾಂಧಿ ಭವನದ ಸಮೀಪ ‘ಭೂಮಿ-ವಸತಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಡವರಿಗೆ ಭೂಮಿ-ವಸತಿ ನೀಡಬೇಕಾದ ಸರ್ಕಾರದ ಉದ್ಧಟತನ ಧೋರಣೆಯಿಂದ, ಬಡಜನತೆ ನಿರ್ಗತಿಕರಾಗಿ ಬದುಕುವ ದಯನೀಯ ಸ್ಥಿತಿ ಎದುರಾಗಿದೆ. ಸರಕಾರಗಳು ಸರಕಾರಿ ಭೂಮಿಯನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಧಾರೆ ಎರೆಯುತ್ತಿವೆ ಎಂದರು. ಭೂಮಿ, ವಸತಿ ಸಮಸ್ಯೆಗೆ ಸಮಗ್ರ ಪರಿಹಾರ ಸಿಗುವ ವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ದೊರೆಸ್ವಾಮಿ ಹೇಳಿದರು.
5ನೆ ದಿನಕ್ಕೆ ಸತ್ಯಾಗ್ರಹ: ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಕ್ಕೆ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಭೂಕಬಳಿಕೆ ಕುರಿತ ಎಟಿ ರಾಮಸ್ವಾಮಿ ವರದಿ ಅನುಷ್ಠಾನ ವೇದಿಕೆ ಹಾಗೂ ದಲಿತ-ದಮನಿಯರ ಸ್ವಾಭಿಮಾನ ಹೋರಾಟ ಸಮಿತಿ , ದಲಿತ್ ಪೋರಂನ ಮುಖಂಡರು ಸತ್ಯಾಗ್ರಹದಲ್ಲಿ ಪಾಲ್ಗೊಂಡು, ಸತ್ಯಾಗ್ರಹ ನಿರತರಿಗೆ ಕುಡಿಯುವ ನೀರು, ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಸಂಘಟನೆಗಳು ಮುಂದಾಗಿವೆ. ಧರಣಿ ನಿರತ ಸ್ಥಳದಲ್ಲಿ ಊಟ, ಉಪಹಾರ ಹಾಗೂ ರಾತ್ರಿ ವೇಳೆ ತಂಗಲು ಸಂಘಟನೆಗಳು ವ್ಯವಸ್ಥೆ ಕಲ್ಪಿಸಿವೆ.







