ಅಂಗವಿಕಲ ಕ್ರೀಡಾಪಟುವಿಗೆ ಭೂಮಿ ಮಂಜೂರು ವಿಳಂಬ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಜ.14: ಅಂಗವಿಕಲ ಕ್ರೀಡಾಪಟು ಒಬ್ಬರಿಗೆ ಅಡುಗೆ ಅನಿಲ ಸಿಲಿಂಡರ್ ಮಾರಾಟ ಕೇಂದ್ರ ಹಾಗೂ ಗೋದಾಮುಗಾಗಿ ನಗರದಲ್ಲಿ ಭೂಮಿ ಮಂಜೂರು ಮಾಡಲು ವಿಳಂಬ ಮಾಡುತ್ತಿರುವ ವಿಚಾರ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಭೂಮಿ ಮಂಜೂರು ಮಾಡಲು ಹಲವು ವರ್ಷಗಳಿಂದ ಸತಾಯಿಸುತ್ತಿರುವ ರಾಜ್ಯ ಕಂದಾಯ ಇಲಾಖೆ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತದ ವಿರುದ್ಧ ಅಂತರಾಷ್ಟ್ರೀಯ ಮಟ್ಟದ ಅಂಗವಿಕಲ ಕ್ರೀಡಾಪಟು ಎಂ.ಮಹದೇವ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಉತ್ತರ ತಾಲೂಕು ತಶೀಲ್ದಾರ್‌ಗೆ ನೋಟಿಸ್ ಜಾರಿ ಮಾಡಿತು.
64 ವರ್ಷದ ಹಿರಿಯ ಅಂತರಾಷ್ಟ್ರೀಯ ಮಟ್ಟದ ಅಂಗವಿಕಲ ಕ್ರೀಡಾಪಟು ಎಂ.ಮಹದೇವ ಅವರು, ಅಡುಗೆ ಅನಿಲ ಮಾರಾಟ ಕೇಂದ್ರ ನಡೆಸುತ್ತಿದ್ದಾರೆ. ಸದ್ಯ ಖಾಸಗಿಯವರಿಗೆ ಸೇರಿದ ಸ್ಥಳವನ್ನು ಪಡೆದು ಕೇಂದ್ರ ನಡೆಸುತ್ತಿದ್ದಾರೆ. ಹೀಗಾಗಿ, ತಮಗೆ ಕೇಂದ್ರ ನಡೆಸಲು ನಗರದಲ್ಲಿ ಜಾಗ ಮಂಜೂರು ಮಾಡುವಂತೆ ರಾಜ್ಯ ಕಂದಾಯ ಇಲಾಖೆಗೆ 2014ರಲ್ಲಿ ಮನವಿ ಸಲ್ಲಿಸಿದ್ದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ನಿರ್ದೇಶನದ ಮೇರೆಗೆ ಹೊಸಕೆರೆ ಹಳ್ಳಿಯ ಸಸರ್ವೇ ನಂ-52ರಲ್ಲಿ ಒಂದು ಎಕರೆ ಜಮೀನು ಗುರುತಿಸಿ, ಅದನ್ನು ಮಹದೇವ ಅವರಿಗೆ ಮಂಜೂರು ಮಾಡಲು ತಹಶೀಲ್ದಾರ್ ಅವರು ನಗರ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಮೊದಲಿಗೆ ಆ ಜಮೀನು ಮಂಜೂರು ಮಾಡಲು ಒಪ್ಪಿದ್ದ ಜಿಲ್ಲಾಡಳಿತ, ತದನಂತರ ಜಮೀನು ವ್ಯಾಜ್ಯದಿಂದ ಕೂಡಿದೆ. ಅದರ ಪರ್ಯಾಯವಾಗಿ ನಗರದ ಬೇರೊಂದು ಪ್ರದೇಶದಲ್ಲಿ ಜಮೀನು ಮಂಜೂರು ಮಾಡುವುದಾಗಿ ತಿಳಿಸಿತ್ತು.
ತದನಂತರ ಉತ್ತರಹಳ್ಳಿಯ ವಡ್ಡರಪಾಳ್ಯದ ಸರ್ವೆ ನಂ 8ರಲ್ಲಿ 35 ಗುಂಟೆ ಜಮೀನು ಗುರುತಿಸಿ ಮಂಜೂರು ಮಾಡಲು ತೀರ್ಮಾನಿಸಿತ್ತು. ಆದರೆ ಈವೆರಗೂ ಮಹದೇವ ಅವರಿಗೆ ಜಮೀನು ಮಂಜೂರು ಮಾಡಿಲ್ಲ. ಈ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಮಹದೇವ ಅವರು, ಸದ್ಯದ ತಮ್ಮ ಅಡುಗೆ ಅನಿಲ ಮಾರಾಟ ಕೇಂದ್ರವಿರುವ ಜಾಗದ ಒಪ್ಪಂದವು 2018ರ ಮಾರ್ಚ್ 31ರಕ್ಕೆ ಮುಗಿಯಲಿದೆ. ಈ ಸಂದರ್ಭದಲ್ಲಿ ಸರಕಾರ ಜಮೀನು ಮಂಜೂರು ಮಾಡದೆ ಹೋದರೆ ತಮಗೆ ಕೇಂದ್ರ ನಡೆಸಲು ತೀವ್ರಮಟ್ಟದಲ್ಲಿ ತೊಂದರೆಯಾಗಲಿದೆ ಎಂದು ಆರೋಪಿಸಿದ್ದಾರೆ. ಹಾಗೆಯೇ, ಈಗಾಗಲೇ ಉತ್ತರಹಳ್ಳಿಯಲ್ಲಿ ಗುರುತಿಸಿರುವ ಜಮೀನು ತಮಗೆ ಮಂಜೂರು ಮಾಡುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.







