ಸಮಾಜ ದ್ರೋಹಿಗಳ ವಿರುದ್ದ ಗೂಂಡಾ ಕಾಯ್ದೆ: ಗೃಹ ಸಚಿವ ರಾಮಲಿಂಗಾರೆಡ್ಡಿ

ಶಿವಮೊಗ್ಗ, ಜ. 14 : ರಾಜ್ಯದಲ್ಲಿ ಒಟ್ಟು 2223 ಕೋಟಿ ರೂ. ವೆಚ್ಚದಲ್ಲಿ 11 ಸಾವಿರ ಪೊಲೀಸ್ ವಸತಿ ಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ನಿರ್ಮಾಣ ಕಾರ್ಯ ಪೂರ್ಣಗೊಂಡಿರುವ ಎರಡೂವರೆ ಸಾವಿರ ಮನೆಗಳನ್ನು ಈಗಾಗಲೇ ಹಸ್ತಾಂತರಿಸಲಾಗಿದೆ ಎಂದು ಗೃಹ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಭಾನುವಾರ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‍ಪೇಟೆಯಲ್ಲಿ ನೂತನ ಪೊಲೀಸ್ ಠಾಣೆ ಕಟ್ಟಡ ಉದ್ಘಾಟಿಸಿದ ನಂತರ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ 250 ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕುಗಳಲ್ಲಿ ಪೊಲೀಸ್ ವಸತಿಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು' ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಎರಡು ಪೊಲೀಸ್ ಠಾಣೆಗೆ ಹೊಸ ಕಟ್ಟಡಗಳನ್ನು ಈಗಾಗಲೇ ನಿರ್ಮಿಸಲಾಗಿದ್ದು, ಒಂದು ಕಟ್ಟಡ ಕಾಮಗಾರಿ ನಡೆಯುತ್ತಿದೆ. ರಿಪ್ಪನ್‍ಪೇಟೆಯಲ್ಲಿ 1.29 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ಠಾಣೆ ಕಟ್ಟಡ ನಿರ್ಮಿಸಲಾಗಿದೆ. 250 ವಸತಿಗೃಹಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ನೇಮಕಾತಿ: ಕಳೆದ ನಾಲ್ಕುವರೆ ವರ್ಷಗಳಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಹಾಗೂ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲಾಗಿದ್ದು, 28ಸಾವಿರ ಕಾನ್ಸ್ ಸ್ಟೇಬಲ್ ಹಾಗೂ 1642 ಎಸ್‍ಐ ನೇಮಕಾತಿ ಪೂರ್ಣಗೊಳಿಸಲಾಗಿದೆ. ಇನ್ನೂ 18ಸಾವಿರ ಪೊಲೀಸ್ ಕಾನ್ಸ್ ಸ್ಟೇಬಲ್‍ಗಳ ನೇಮಕಾತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದೇ ರೀತಿ 10 ವರ್ಷ ಸೇವೆ ಸಲ್ಲಿಸಿರುವ ಅಧಿಕಾರಿ ಸಿಬ್ಬಂದಿಗಳಿಗೆ ಹುದ್ದೆಯಲ್ಲಿ ಬಡ್ತಿ ಸಹ ನೀಡಲಾಗುತ್ತಿದೆ ಎಂದು ಹೇಳಿದರು.
ಜನಸ್ನೇಹಿ ಪೊಲೀಸ್ ಠಾಣೆ: ಎಲ್ಲಾ ಪೊಲೀಸ್ ಠಾಣೆಗಳನ್ನು ಜನಸ್ನೆಹಿಯನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಲು, ಅವರಿಗೆ ಕುಳಿತುಕೊಳ್ಳಲು ಕುರ್ಚಿ, ಕುಡಿಯಲು ನೀರು ಒದಗಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾತನಾಡಿ, ಕಾನೂನಿಗೆ ಗೌರವ ನೀಡುವ ಸಂಪ್ರದಾಯ ಜಿಲ್ಲೆಯಲ್ಲಿದ್ದು, ಜನರ ದೂರುಗಳಿಗೆ ಬೇಗನೆ ಸ್ಪಂದಿಸುವ ಅಗತ್ಯವಿದೆ ಎಂದರು.
ಅಟೋಮಿತ್ರ ಆಪ್ ಬಿಡುಗಡೆ: ಅಟೋ ರಿಕ್ಷಾ ಸೇವೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಅಭಿವೃದ್ದಿಪಡಿಸಲಾಗಿರುವ ಆಪ್ ಅನ್ನು ಉಸ್ತುವಾರಿ ಸಚಿವರು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಜಿಲ್ಲೆಯಲ್ಲಿ 3ಸಾವಿರ ಅಟೋ ಚಾಲಕರಿಗೆ ಗುರುತಿನ ಕಾರ್ಡ್ ನೀಡಲಾಗಿದೆ. ಈಗ ಅಟೋಮಿತ್ರ ಆಪ್ ಮೂಲಕ ಸಾರ್ವಜನಿಕರು ಅಟೋ ಸಾರಿಗೆ ಸೇವೆ ಕುರಿತಾದ ಅಹವಾಲು, ದೂರುಗಳನ್ನು ಕ್ಷಣಾರ್ಧದಲ್ಲಿ ದಾಖಲಿಸಬಹುದಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಅಭಿನವ ಖರೆ ಅವರು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಮುತ್ತುರಾಜ್, ಜಿಲ್ಲಾಧಿಕಾರಿ ಡಾ.ಲೋಕೇಶ್, ತಾಲೂಕು ಪಂಚಾಯತ್ ಅಧ್ಯಕ್ಷ ವಾಸಪ್ಪ ಗೌಡ, ಜಿಲ್ಲಾ ಪಂಚಾಯತ್ ಸದಸ್ಯೆ ಶ್ವೇತಾ ಆರ್.ಬಂಡಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮಮ್ಮ ಲಕ್ಷ್ಮಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸಮಾಜದ್ರೋಹಿಗಳ ವಿರುದ್ದ ಗೂಂಡಾ ಕಾಯ್ದೆ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸಮಾಜದ್ರೋಹಿ ಶಕ್ತಿಗಳ ವಿರುದ್ಧ ಗೂಂಡಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಮಹಿಳಾ ಕಾಲೇಜುಗಳ ಸುತ್ತಮುತ್ತ ಗಸ್ತು ಬಿಗಿಗೊಳಿಸಲಾಗಿದ್ದು, ಮಹಿಳೆಯ ಸುರಕ್ಷೆತೆಗೆ ಒತ್ತು ನೀಡಲಾಗುತ್ತಿದೆ. ಮಟ್ಕಾ, ಇಸ್ಪೀಟು ದಂಧೆಗಳನ್ನು ನಿಯಂತ್ರಿಸಲಾಗಿದೆ. ನಗರ ಪ್ರದೇಶಗಳಲ್ಲಿ ಗಾಂಜಾ, ಅಫೀಮು ಮುಂತಾದ ಮಾದಕ ವಸ್ತುಗಳ ವ್ಯವಹಾರಗಳನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲಾಗಿದ್ದು, ಈ ಎಲ್ಲಾ ಕಾರ್ಯಗಳಲ್ಲಿ ಸಾರ್ವಜನಿಕ ಸಹಕಾರ ಅಗತ್ಯವಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.







