ನಾಲ್ವರು ನಿವೃತ್ತ ನ್ಯಾಯಾಧೀಶರಿಂದ ನ್ಯಾ.ದೀಪಕ್ ಮಿಶ್ರಾರಿಗೆ ಬಹಿರಂಗ ಪತ್ರ
ಪ್ರಕರಣಗಳನ್ನು ಹಂಚುವಲ್ಲಿ ಪಾರದರ್ಶಕತೆ

ಹೊಸದಿಲ್ಲಿ, ಜ.14: ಭಾರತದ ಮುಖ್ಯ ನ್ಯಾಯಮೂರ್ತಿಯವರಿಗೆ, ಸರ್ವೋಚ್ಚ ನ್ಯಾಯಾಲಯದ ಒಬ್ಬರು ಮತ್ತು ಉಚ್ಚ ನ್ಯಾಯಾಲಯದ ಮೂವರು ನಿವೃತ್ತ ನ್ಯಾಯಾಧೀಶರು ಬರೆದಿರುವ ಬಹಿರಂಗ ಪತ್ರದಲ್ಲಿ ಪ್ರಕರಣಗಳನ್ನು ಹಂಚುವ ಪ್ರಕ್ರಿಯೆಯಲ್ಲಿ ವೈಚಾರಿಕತೆ, ನ್ಯಾಯ ಮತ್ತು ಪಾರದರ್ಶಕತೆಯನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ. ಇದರಿಂದ ಮಾತ್ರ, ಪ್ರಮುಖ ಮತ್ತು ಸೂಕ್ಷ್ಮ ಪ್ರಕರಣಗಳಲ್ಲಿ ನಿಗದಿತ ಫಲಿತಾಂಶವನ್ನು ಪಡೆಯಲು ಅಧಿಕಾರದ ದುರುಪಯೋಗವಾಗುತ್ತಿಲ್ಲ ಎಂಬ ಭರವಸೆಯನ್ನು ಜನರಲ್ಲಿ ಮೂಡಿಸಲು ಸಾಧ್ಯ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
ಸೂಕ್ಷ್ಮ ಮತ್ತು ಪ್ರಮುಖ ಪ್ರಕರಣಗಳನ್ನು ಕಿರಿಯ ನ್ಯಾಯಾಧೀಶರ ಆಯ್ದ ಪೀಠಕ್ಕೆ ಕಳುಹಿಸುವಂಥ ನಿರಂಕುಶ ರೀತಿಯಲ್ಲಿ ಮುಖ್ಯ ನ್ಯಾಯಾಧೀಶರು ಪ್ರಕರಣಗಳನ್ನು ಹಂಚುವಂತಿಲ್ಲ ಎಂದು ನಿವೃತ್ತ ನ್ಯಾಯಾಧೀಶರಾದ ಪಿಬಿ ಸಾವಂತ್, ಎಪಿ ಶಾ, ಕೆ. ಚಂದ್ರು ಮತ್ತು ಎಚ್. ಸುರೇಶ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಶುಕ್ರವಾರದಂದು ಪತ್ರಿಕಾಗೋಷ್ಟಿ ಕರೆದಿದ್ದ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಾಧೀಶರು ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಅವರು ಪ್ರಕರಣಗಳನ್ನು ಹಂಚುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ದೂರಗಾಮಿ ಪರಿಣಾಮಗಳುಳ್ಳ ಪ್ರಕರಣಗಳನ್ನು ಯಾವುದೇ ಪಾರದರ್ಶಕತೆ ಇಲ್ಲದೆ ಹಂಚಲಾಗುತ್ತಿದೆ ಮತ್ತು ಸೂಕ್ಷ್ಮ ಪ್ರಕರಣಗಳನ್ನು ಕಿರಿಯ ನ್ಯಾಯಾಧೀಶರಿಗೆ ಒಪ್ಪಿಸಲಾಗುತ್ತಿದೆ ಎಂದು ನ್ಯಾಯಾಧೀಶರಾದ ಜೆ. ಚಲಮೇಶ್ವರ, ರಂಜನ್ ಗೊಗೊಯಿ, ಎಂ.ಬಿ ಲೊಕೂರ್ ಮತ್ತು ಕುರಿಯನ್ ಜೋಸೆಫ್ ತಿಳಿಸಿದ್ದರು. ತಮ್ಮ ಕಾಳಜಿಯನ್ನು ವಿವರಿಸಲು ಮುಖ್ಯನ್ಯಾಯಮೂರ್ತಿಗಳನ್ನು ಭೇಟಿಯಾಗಿ ಚರ್ಚೆ ನಡೆಸಲು ವಿಫಲವಾದ ಕಾರಣದಿಂದ ಸಾರ್ವಜನಿಕವಾಗಿ ಪತ್ರಿಕಾಗೋಷ್ಟಿ ಕರೆದು ತಿಳಿಸಬೇಕಾಯಿತು ಎಂದವರು ಸ್ಪಷ್ಟನೆ ನೀಡಿದ್ದರು. ಈ ಆರೋಪವನ್ನು ತಳ್ಳಿಹಾಕಿರುವ ನ್ಯಾಯಾಂಗದ ಮೂಲಗಳು ಶ್ರೇಷ್ಠ ನ್ಯಾಯಾಲಯದಲ್ಲಿ ಎಲ್ಲವೂ ಸರಿಯಾಗಿದೆ ಮತ್ತು ಪ್ರಕರಣಗಳನ್ನು ನ್ಯಾಯಯುತವಾಗಿ ನ್ಯಾಯಾಧೀಶರಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿವೆ.
ಪ್ರಕರಣಗಳ ಹಂಚಿಕೆಗೆ ಸಂಬಂಧಿಸಿ ಸ್ಪಷ್ಟ ನೀತಿ ನಿಯಮಗಳನ್ನು ಜಾರಿಮಾಡುವವರೆಗೆ ಬಾಕಿಯುಳಿದಿರುವಂತವುಗಳನ್ನೂ ಸೇರಿಸಿ ಎಲ್ಲಾ ಸೂಕ್ಷ್ಮ ಮತ್ತು ಪ್ರಮುಖ ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯದ ಐದು ಹಿರಿಯ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠಕ್ಕೇ ಒಪ್ಪಿಸಬೇಕು ಎಂದು ನಿವೃತ್ತ ನ್ಯಾಯಾಧೀಶರು ಬರೆದಿರುವ ಪತ್ರದಲ್ಲಿ ಸೂಚಿಸಲಾಗಿದೆ.
ಶನಿವಾರ ಈ ಕುರಿತು ಹೇಳಿಕೆ ನೀಡಿದ ಸರ್ವೋಚ್ಚ ನ್ಯಾಯಾಲಯದ ವಕೀಲರನ್ನೊಳಗೊಂಡ ಬಾರ್ ಕೌನ್ಸಿಲ್, ಇದೇ ರೀತಿಯ ಸಲಹೆಯನ್ನು ನೀಡಿತ್ತು. ಸಾರ್ವಜನಿಕ ಹಿತಾಸಕ್ತಿ ದಾವೆಗಳು ಮೊದಲ ಐದು ನ್ಯಾಯಪೀಠಗಳನ್ನು ದಾಟಿ ಹೋಗದಂತೆ ನೋಡಿಕೊಳ್ಳಬೇಕು ಎಂದು ಶನಿವಾರ ನಡೆದ ತುರ್ತು ಸಭೆಯ ನಂತರ ಬಾರ್ ಕೌನ್ಸಿಲ್ ಸಲಹೆ ನೀಡಿತ್ತು.







