ಗಡಿಯಾಚೆಯ ಭಯೋತ್ಪಾದನೆ ಅಂತ್ಯಕ್ಕೆ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಿಸಲು ಜ.ರಾವತ್ ಒಲವು

ಹೊಸದಿಲ್ಲಿ,ಜ.14: ಜಮ್ಮು-ಕಾಶ್ಮೀರದಲ್ಲಿ ಶಾಂತಿಯನ್ನು ಸ್ಥಾಪಿಸಲು ಮಿಲಿಟರಿ ಕಾರ್ಯಾಚರಣೆಗಳೊಂದಿಗೆ ರಾಜಕೀಯ ಉಪಕ್ರಮವೂ ಜೊತೆಯಾಗಿ ಸಾಗಬೇಕು ಎಂದು ರವಿವಾರ ಇಲ್ಲಿ ಹೇಳಿದ ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರು, ರಾಜ್ಯದಲ್ಲಿ ಗಡಿಯಾಚೆಯ ಭಯೋತ್ಪಾದನೆಯನ್ನು ನಿಲ್ಲಿಸುವಂತೆ ಪಾಕಿಸ್ತಾನದ ಮೇಲೆ ಒತ್ತಡವನ್ನು ಹೆಚ್ಚಿಸಲು ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಬಗ್ಗೆ ಒಲವು ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಸಶಸ್ತ್ರ ಪಡೆಗಳು ‘ಯಥಾಸ್ಥಿತಿ ವಾದಿ’ಗಳಾಗಿರಲು ಸಾಧ್ಯವಿಲ್ಲ ಮತ್ತು ಪರಿಸ್ಥಿತಿಯನ್ನು ಎದುರಿಸಲು ಹೊಸ ವ್ಯೆಹಗಳು ಮತ್ತು ತಂತ್ರಗಳನ್ನು ರೂಪಿಸಬೇಕು ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಅವರು, ಒಂದು ವರ್ಷದ ಹಿಂದೆ ತಾನು ಸೇನಾ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪರಿಸ್ಥಿತಿಯಲ್ಲಿ ಕೊಂಚ ಸುಧಾರಣೆಯಾಗಿದೆ ಎಂದರು.
ಗಡಿಯಾಚೆಯ ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪಾಕಿಸ್ತಾನದ ಮೇಲೆ ಒತ್ತಡವನ್ನು ಹೆಚ್ಚಿಸಲು ಅವಕಾಶವಿದೆ ಎಂದು ಹೇಳುವ ಮೂಲಕ ಅವರು, ಉಗ್ರವಾದದ ವಿರುದ್ಧ ತನ್ನ ದಾಳಿಯನ್ನು ಸೇನೆಯು ಮುಂದುವರಿಸಲಿದೆ ಎಂಬ ಸ್ಪಷ್ಟ ಸುಳಿವನ್ನು ನೀಡಿದರು.
ರಾಜಕೀಯ ಮತ್ತು ಇತರ ಎಲ್ಲ ಉಪಕ್ರಮಗಳು ಜೊತೆಜೊತೆಯಾಗಿ ಸಾಗಬೇಕು ಮತ್ತು ನಾವೆಲ್ಲರೂ ಒಂದಾಗಿ ಕಾರ್ಯನಿರ್ವಹಿಸಿದರೆ ಕಾಶ್ಮೀರದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಸಾಧ್ಯ. ನಾವು ರಾಜಕೀಯ-ಮಿಲಿಟರಿ ಕಾರ್ಯತಂತ್ರವನ್ನು ಅಳವಡಿಸಿ ಕೊಳ್ಳಬೇಕಿದೆ ಎಂದರು.
ಮಿಲಿಟರಿಯು ಕಾಶ್ಮೀರ ಬಿಕ್ಕಟ್ಟನ್ನು ಬಗೆಹರಿಸುವ ವ್ಯವಸ್ಥೆಯ ಒಂದು ಭಾಗ ಮಾತ್ರವಾಗಿದೆ. ರಾಜ್ಯದಲ್ಲಿ ಹಿಂಸೆಯನ್ನು ಸೃಷ್ಟಿಸುತ್ತಿರುವ ಭಯೋತ್ಪಾದಕರನ್ನು ಮಟ್ಟ ಹಾಕುವುದು ಹಾಗು ಯುವಜನರು ಮೂಲಭೂತೀಕರಣಗೊಂಡು ಭಯೋತ್ಪಾದನೆ ಯನ್ನು ಅಪ್ಪಿಕೊಳ್ಳುವುದನ್ನು ತಡೆಯುವುದು ನಮ್ಮ ಕೆಲಸವಾಗಿದೆ. ಇದೇ ವೇಳೆ ನಾವು ಜನರಿಗೂ ಸಮೀಪವಾಗಬೇಕಿದೆ ಎಂದು ಜ.ರಾವತ್ ನುಡಿದರು.







