ಮಾಸ್ತಿಕಟ್ಟೆ: ಸಾರ್ವಜನಿಕ ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮ

ಉಳ್ಳಾಲ, ಜ. 14: ವಾಟ್ಸ್ಆ್ಯಪ್ ಗ್ರೂಪ್ ಮೂಲಕ ಸಂಘಟಿಸಿ, ಸಮಾಜಕ್ಕೆ ಅತ್ಯುತ್ತಮ ಸೇವೆಯನ್ನು ನೀಡುತ್ತಿರುವ ಯುವಕರ ಕಾರ್ಯ ಶ್ಲಾಘನೀಯ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ರವಿವಾರ ಜರಗಿದ ಮೇಲಂಗಡಿ ಕ್ರಿಕೆಟ್ ಕ್ಲಬ್, ಆಝಾದ್ ಫ್ರೆಂಡ್ಸ್ ಸರ್ಕಲ್ ಹಾಗೂ ಉಳ್ಳಾಲ ವಲಯದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ದೇರಳಕಟ್ಟೆ ಯೆನೆಪೊಯ ಆಸ್ಪತ್ರೆ ಇದರ ಸಹಯೋಗದೊಂದಿಗೆ ದ್ವಿತಿಯ ಸಂಭ್ರಮ ಮತ್ತು ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನವನ್ನು ಬಲಪಡಿಸಿಕೊಂಡು ಯುವಕರ ಸಂಘಟನೆಯ ಮನೋಭಾವ, ಉದ್ದೇಶ ಸಮಾಜಕ್ಕೆ ಪೂರಕವಾಗಿದೆ. ತಾಳ್ಮೆ, ಪ್ರೀತಿ ,ವಿಶ್ವಾಸ, ಸಹೋದರತೆಯಿಂದ ಯುವಸಮುದಾಯ ಬಾಳಬೇಕಿದೆ. ಕಷ್ಟಗಳು ಎದುರಾದಲ್ಲಿ ಸಕಾರಾತ್ಮಕ ಸ್ಪಂಧಿಸುತ್ತಾ ಮುಂದುವರಿಯುವುದು ಜಾಣತನ. ರಾಜ್ಯದಲ್ಲೇ ಉಳ್ಳಾಲ ನಗರಸಭೆ ಅತ್ಯುತ್ತಮ ನಗರಸಭೆ ಎಂಬ ಪುರಸ್ಕಾರವನ್ನು ಪಡೆದಿದ್ದು, ಅದಕ್ಕೆ ಅನುಗುಣವಾಗಿ ಆಡಳಿತ ಮಂಡಳಿ ಕಾರ್ಯಾಚರಿಸುತ್ತಿದೆ. ಉಳ್ಳಾಲದಾದ್ಯಂತ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಒದಗಿಸಲಾಗಿದ್ದು, ಬಹುತೇಕ ಕಾಮಗಾರಿಯೂ ಪೂರ್ಣಗೊಂಡಿದೆ ಎಂದರು.
ಈ ಸಂದರ್ಭ ಉಳ್ಳಾಲದ ಹಿಂದಿನ ಖಾಝಿ ತಾಜುಲ್ ಉಲೆಮಾ ತಂಙಳ್ ಅವರ ಹೆಸರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಚಿವ ಖಾದರ್ ಉದ್ಘಾಟಿಸಿದರು. ಸ್ಥಳೀಯ ಸುಧಾಕರ್ ಪೂಂಜಾ ಅವರು ಘಟಕವನ್ನು ಕೊಡುಗೆಯಾಗಿ ನೀಡಿದ್ದಾರೆ.
ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಕರಾವಳಿ ಅಧ್ಯಕ್ಷ ಯು.ಬಿ.ಸಲೀಂ, ಉಳ್ಳಾಲ ನಗರಸಭೆ ಸದಸ್ಯ ಮುಸ್ತಾಫ ಅಬ್ದುಲ್ಲಾ, ಎಸ್ ವೈಎಸ್ ದ.ಕ ಜಿಲ್ಲಾ ಕೋಶಾಧಿಕಾರಿ ಹನೀಫ್ ಬಿ.ಜಿ, ಮೇಲಂಗಡಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಯಹ್ಯಾ ಬಿಲಾಲ್, ಸಚಿವರ ಆಫ್ತ ಕಾರ್ಯದರ್ಶಿ ಮಹಮ್ಮದ್ ಲಿಬ್ಝತ್, ಉಪಾಧ್ಯಕ್ಷ ಹನೀಫ್, ಸಲಹೆಗಾರ ಅಶ್ರಫ್, ಆಝಾದ್ ಪ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಮುಝಾಫರ್, ಫಿಶ್ ಮಿಲ್ ಮತ್ತು ಆಯಿಲ್ ಅಸೋಸಿಯೇಷನ್ ಅಧ್ಯಕ್ಷ ಹೆಚ್.ಕೆ.ಖಾಧರ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಎಡ್ಮಿನ್ ಸಾದಿಕ್ ಪಾವೂರು, ಕೃಷ್ಣಾಪುರ ವಲಯ ಅಡ್ಮಿನ್ ಇಫ್ತಿಕಾರ್ ಕೃಷ್ಣಾಪುರ, ಕಲಾಯಿ ವಲಯ ಅಡ್ಮಿನ್ ಸಫ್ವಾನ್ ಕಲಾಯಿ, ಕ್ಯಾಂಪಸ್ ವಿಭಾಗದ ಅಡ್ಮಿನ್ ಅಲ್ಮಾರ್ ಉಳ್ಳಾಲ್, ಉಳ್ಳಾಲ ನಗರ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ರಹಮಾನ್, ಇಂಜಿನಿಯರ್ ನವೀನ್ ಮಾಸ್ತಿಕಟ್ಟೆ, ಉದ್ಯಮಿ ಯು.ಹೆಚ್.ಸಲೀಂ ಮುಕ್ಕಚ್ಚೇರಿ, ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್ ಉಪಸ್ಥಿತರಿದ್ದರು.
ಬ್ಲಡ್ ಲೈನ್ ಹೆಲ್ಪ್‌ಲೈನ್ ಉಳ್ಳಾಲ ವಲಯ ಅಡ್ಮಿನ್ ನವಾರ್ ಉಳ್ಳಾಲ ಸ್ವಾಗತಿಸಿದರು. ಬ್ಯಾರಿ ಝುಲ್ಫೀ ಕಾರ್ಯಕ್ರಮ ನಿರೂಪಿಸಿದರು.







