ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಭೇಟಿಯಾದ ಭಾರತೀಯ ವಕೀಲರ ಮಂಡಳಿ ನಿಯೋಗ

ತಿರುವನಂತಪುರ, ಜ. 14: ಸರ್ವೋಚ್ಚ ನ್ಯಾಯಾಲಯ ಎದುರಿಸುತ್ತಿರುವ ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನವಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಭಾರತೀಯ ವಕೀಲರ ಮಂಡಳಿ)ದ ಏಳು ಸದಸ್ಯರ ನಿಯೋಗ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರನ್ನು ರವಿವಾರ ಭೇಟಿಯಾಗಿದೆ. ನಾಲ್ವರು ಹಿರಿಯ ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಬಗ್ಗೆ ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಎರಡು ದಿನಗಳ ಬಳಿಕ ನಿಯೋಗ ನ್ಯಾಯಮೂರ್ತಿ ಆರ್.ಕೆ. ಅಗರ್ವಾಲ್ ಹಾಗೂ ಅನಂತರ ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ಅವರನ್ನು ನಿಯೋಗ ಭೇಟಿಯಾಗಿದೆ. ಬಿಕ್ಕಟ್ಟನ್ನು ತ್ವರಿತವಾಗಿ ಪರಿಹರಿಸಲು ಸಾಧ್ಯವಾಗುವಂತೆ ಸರ್ವೋಚ್ಚ ನ್ಯಾಯಾಲಯದ ಹೆಚ್ಚಿನ ನ್ಯಾಯಾಧೀಶರನ್ನು ರವಿವಾರ ಭೇಟಿಯಾಗಲು ಬಾರ್ ಕೌನ್ಸಿಲ್ ಮಂಡಳಿ ಆಫ್ ಇಂಡಿಯಾ ಶನಿವಾರ ನಿರ್ಧರಿಸಿತ್ತು.
‘‘ಇದು ಸರ್ವೋಚ್ಚ ನ್ಯಾಯಾಲಯದ ಆಂತರಿಕ ವಿಚಾರ ಎಂದು ಮಂಡಳಿಯ ಒಮ್ಮತದ ಅಭಿಪ್ರಾಯ. ವಿಷಯದ ಗಂಭೀರತೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರುಗಳಿಗೆ ಮನವರಿಕೆ ಆಗಬಹುದು ಎಂಬ ನಿರೀಕ್ಷೆ ಹಾಗೂ ನಂಬಿಕೆ ಮಂಡಳಿಗೆ ಇದೆ. ರಾಜಕಾರಣಿಗಳು, ರಾಜಕೀಯ ಪಕ್ಷಗಳಿಗೆ ಲಾಭವಾಗುವ ಅಥವಾ ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಹಾನಿ ಉಂಟು ಮಾಡುವ ಇಂತಹ ಯಾವುದೇ ಪರಿಸ್ಥಿತಿ ಅವರು ಭವಿಷ್ಯದಲ್ಲಿ ತಪ್ಪಿಸಬಹುದು’’ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ನ್ಯಾಯಾಂಗವನ್ನು ಟೀಕಿಸಬೇಡಿ ಅಥವಾ ವಿವಾದಕ್ಕೆ ಗುರಿ ಮಾಡಬೇಡಿ. ಟೀಕಿಸುವುದರಿಂದ ನ್ಯಾಯಾಂಗ ದುರ್ಬಲ ವಾಗಬಹುದು ಎಂದು ಮಂಡಳಿ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳಲ್ಲಿ ವಿನಂತಿಸಿದೆ.
ನಾಲ್ವರು ಹಿರಿಯ ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸಿ ಸುಪ್ರೀಂ ಕೋರ್ಟ್‌ನಲ್ಲಿ ಎಲ್ಲವೂ ಸರಿ ಇದ್ದಂತೆ ಕಾಣುತ್ತಿಲ್ಲ ಎಂಬ ಸಂದೇಶ ರವಾನಿಸಿರುವುದು ದುರಾದೃಷ್ಟಕರ ಹಾಗೂ ಈ ವಿಷಯವನ್ನು ಆಂತರಿಕವಾಗಿ ಪರಿಹರಿಸಿಕೊಳ್ಳಬೇಕಿತ್ತು ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಮನನ್ ಮಿಶ್ರಾ ಹೇಳಿದ್ದಾರೆ.