ದೇವಾಸ್ ಮಲ್ಟಿಮೀಡಿಯದ ಮಾಜಿ ನಿರ್ದೇಶಕರ ವಿರುದ್ಧ ಸಮನ್ಸ್
ಆಂಟ್ರಿಕ್ಸ್-ದೇವಾಸ್ ಪ್ರಕರಣ

ಹೊಸದಿಲ್ಲಿ, ಜ.14: ಸರಕಾರದ ಖಜಾನೆಗೆ 578 ಕೋಟಿ ರೂ. ನಷ್ಟವುಂಟು ಮಾಡಿದ್ದ ಆಂಟ್ರಿಕ್ಸ್-ದೇವಾಸ್ ಒಪ್ಪಂದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ನ್ಯಾಯಾಲಯವು ದೇವಾಸ್ ಮಲ್ಟಿಮೀಡಿಯ ಪ್ರೈ.ಲಿ.ನ ಮಾಜಿ ನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿದೆ.
ದೇವಾಸ್ ಮಲ್ಟಿಮೀಡಿಯ ಪ್ರೈ.ಲಿ.ನ ಮಾಜಿ ನಿರ್ದೇಶಕರಾದ ಮುತ್ಗದಹಳ್ಳಿ ಗಂಗರುದ್ರಯ್ಯ ಚಂದ್ರಶೇಖರ್ ಅವರು ಸದ್ಯ ಅಮೆರಿಕದಲ್ಲಿ ನೆಲೆಸಿರುವ ಕಾರಣ ಈ ಹಿಂದೆ ನೀಡಲಾಗಿರುವ ಸಮನ್ಸ್ ಅವರನ್ನು ತಲುಪಿಲ್ಲ ಎಂದು ತಿಳಿಸಿದಾಗ ವಿಶೇಷ ನ್ಯಾಯಾಧೀಶರಾದ ಸಂತೋಷ್ ಸ್ನೇಹಿಮನ್ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದರು. ಎಪ್ರಿಲ್ 26ರ ಒಳಗಾಗಿ ಆರೋಪಿಯು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
ಇಸ್ರೋದ ಮಾಜಿ ಮುಖ್ಯಸ್ಥರಾದ ಜಿ. ಮಾಧವನ್ ನಾಯರ್, ಆ ಸಮಯದಲ್ಲಿ ಇಸ್ರೊದ ನಿರ್ದೇಶಕರಾಗಿದ್ದ ನಾರಾಯಣ ರಾವ್ ಹಾಗೂ ಅಂದು ಅಂಟ್ರಿಕ್ಸ್‌ನ ಕಾರ್ಯಕಾರಿ ನಿರ್ದೇಶಕರಾಗಿದ್ದ ಕೆ. ಆರ್. ಶ್ರೀಧರ್ ಮೂರ್ತಿಯವರಿಗೆ ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಾಧೀಶರು ಈ ಆದೇಶವನ್ನು ನೀಡಿದರು.
ನಾಯರ್ ಹಾಗೂ ಇಸ್ರೊದ ಇತರ ಅಧಿಕಾರಿಗಳು ಕಾನೂನುಬಾಹಿರವಾಗಿ ಇನ್ಸಾಟ್ ಉಪಗ್ರಹದ ನಿರ್ಬಂಧಿತ ತರಂಗಾಂತರಗಳನ್ನು ಆಂಟ್ರಿಕ್ಸ್‌ನ ದೇವಾಸ್ ಮಲ್ಟಿಮೀಡಿಯಕ್ಕೆ ನೀಡಿದ್ದಾರೆ. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ 578 ಕೋಟಿ ರೂ. ನಷ್ಟವಾಗಿದೆ ಎಂದು ಸಿಬಿಐ ತನ್ನ ದೋಷಾರೋಪ ಪಟ್ಟಿಯಲ್ಲಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 16ರಂದು ನ್ಯಾಯಾಲಯವು ನಾಯರ್ ಹಾಗೂ ಇತರರ ವಿರುದ್ಧ ಸಮನ್ಸ್ ಜಾರಿ ಮಾಡಿತ್ತು.