1 ಲಕ್ಷ ಕೋ. ರೂ. ಮೌಲ್ಯದ ಶತ್ರು ಆಸ್ತಿ ಹರಾಜಿಗೆ ಕೇಂದ್ರ ಚಿಂತನೆ

ಹೊಸದಿಲ್ಲಿ, ಜ. 14: ಒಂದು ಲಕ್ಷ ಕೋಟಿ. ರೂ. ಮೌಲ್ಯದ ಶತ್ರು ಆಸ್ತಿಗಳನ್ನು ಹರಾಜು ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಅದಕ್ಕಾಗಿ ಇಂತಹ ಎಲ್ಲ ಆಸ್ತಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಗೃಹ ಸಚಿವಾಲಯ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಪಾಕಿಸ್ತಾನ ಹಾಗೂ ಚೀನದ ನಾಗರಿಕತ್ವ ಪಡೆದ ವ್ಯಕ್ತಿಗಳು ಭಾರತದಲ್ಲಿ ತ್ಯಜಿಸಿ ಹೋದ ಆಸ್ತಿಗಳು.
ದೇಶದ ವಿಭಜನೆ ಸಂದರ್ಭ ಹಾಗೂ ಅನಂತರ ಪಾಕಿಸ್ತಾನ, ಚೀನಕ್ಕೆ ವಲಸೆ ಹೋದ ವ್ಯಕ್ತಿಗಳ, ಹಕ್ಕು ಪ್ರತಿಪಾದಿಸದ ಸೊತ್ತುಗಳ ಉತ್ತರಾಧಿಕಾರ ಖಾತರಿಗೊಳಿಸುವ 49 ವರ್ಷ ಹಳೆಯ ಶತ್ರು ಆಸ್ತಿ ಕಾಯ್ದೆ (ತಿದ್ದುಪಡಿ ಹಾಗೂ ದೃಡೀಕರಣ)ಗೆ ತಿದ್ದುಪಡಿ ತಂದ ಬಳಿಕ ಸರಕಾರ ಈ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
6,289 ಶತ್ರು ಆಸ್ತಿಯ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಉಳಿದ 2,991 ಆಸ್ತಿಯ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಇತ್ತೀಚೆಗೆ ನಡೆದ ಸಭೆಯಲ್ಲಿ ಕೇಂದ್ರ ಸಚಿವ ರಾಜ್‌ನಾಥ್ ಸಿಂಗ್ ತಿಳಿಸಿರುವುದಾಗಿ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
9,400 ಸೊತ್ತಿನ ವೌಲ್ಯ 1 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಇದರಿಂದ ಸರಕಾರ ದೊಡ್ಡ ಮೊತ್ತ ಸಿಗಲಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.