ಸುಂಟಿಕೊಪ್ಪ: ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ; ಲಕ್ಷಾಂತರ ರೂ ನಷ್ಟ

ಸುಂಟಿಕೊಪ್ಪ,ಜ.14: ಕೊಡಗರಹಳ್ಳಿಯ ಐಬಿಸಿ ಸಮೂಹದ ಕೂರ್ಗ್‍ಹಳ್ಳಿ ತೋಟದಲ್ಲಿ ವಿದ್ಯುತ್ ಟಾನ್ಸ್ ಫಾರಂನಿಂದ ಭಾನುವಾರ ಮಧ್ಯಾಹ್ನ ವಿದ್ಯುತ್ ಸ್ಪರ್ಶಗೊಂಡಿದ್ದು, ಪಕ್ಕದಲ್ಲಿದ್ದ ಕಾಡು ಗುಂಟೆ ಗಿಡಗಳಿಗೆ ತಗುಲಿದ ಬೆಂಕಿಯಿಂದ ಹತ್ತಾರು ಎಕರೆ ಕೃಷಿ ಭರಿತ ಕಾಫಿ ತೋಟವು ಬೆಂಕಿ ಕೆನ್ನಾಲಗೆ ಆಹುತಿಗೊಂಡು ಲಕ್ಷಾಂತರ ರೂ ನಷ್ಟ ಉಂಟಾಗಿದೆ.
ಇಲ್ಲಿಗೆ ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಐಬಿಸಿ ಸಮೂಹದ ಕೂರ್ಗ್‍ಹಳ್ಳಿ ತೋಟದ ಮಧ್ಯಭಾಗದಲ್ಲಿ ಅಳವಡಿಸಲಾಗಿದ್ದ ಟ್ರಾನ್ಸ್ ಫಾರಂ ನಿಂದ ಮಧ್ಯಾಹ್ನದ ವೇಳೆ ಸಿಡಿದ ಕಿಡಿಯಿಂದ ಹತ್ತಿರದಲ್ಲಿಯೇ ಇದ್ದ ಕಾಡು ಗಿಡ ಗುಂಟೆಗಳಿಗೆ ಬೆಂಕಿ ತಗುಲಿ ಫಸಲು ಭರಿತ ಕಾಫಿ ಗಿಡಗಳು ಸುಟ್ಟುಕರಲಾಗಿದೆ. ತೋಟದಲ್ಲಿಯೇ ನಿರ್ಮಿಸಲಾದ ಕೊಳವೆ ಬಾವಿಯಿಂದ ನೀರು ಹಾಯಿಸಲು ಆಳವಡಿಸಿದ ವಿದ್ಯುತ್ ಮೋಟಾರು, ಪ್ಲಾಸ್ಟಿಕ್ ಪೈಪ್‍ಗಳಿಗೆ ಹೊತ್ತಿಕೊಂಡ ಬೆಂಕಿಯ ತೀವ್ರತೆಯು ಹೆಚ್ಚಿದ ಪರಿಣಾಮ ಸುಮಾರು 8 ರಿಂದ 10 ಎಕರೆ ತೋಟವು ಬೆಂಕಿಗೆ ಆಹುತಿಯಾಗಿದೆ. ಅಂದಾಜು ಮೌಲ್ಯ 50 ರಿಂದ 80 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ತೋಟದ ರೈಟರ್ ಸಲೀಂ ತಿಳಿಸಿದ್ದಾರೆ.





