ಕುಂಪಲ ನೂರಾನಿ ಯತೀಂ ಖಾನಾದಲ್ಲಿ ವಧು-ವರರ ಸಮಾವೇಶ
ಉಳ್ಳಾಲ, ಜ. 14: ಬಡವನಾಗಿ ಹುಟ್ಟಿದ ಮಾತ್ರಕ್ಕೆ ಆತ ಬಡವನಾಗಿಯೇ ಸಾಯಬೇಕು ಎಂದೇನೂ ಇಲ್ಲ. ಇಂದು ಬಡತನದ ಕಾರಣಕ್ಕೆ ಯತೀಂ ಖಾನಾದಲ್ಲಿ ಆಶ್ರಯ ಪಡೆದು ಶಿಕ್ಷಣ ಪಡೆದವರು ಮುಂದೊಂದು ದಿನ ಸಮಾಜ, ದೇಶ, ಕುಟುಂಬದ ಆಸ್ತಿಯಾಗಬೇಕು. ಅನಾಥರನ್ನು ಸಲಹುತ್ತಿರುವ ಸಂಸ್ಥೆಯೊಂದು ಸಾಮಾಜಿಕ ಬದ್ಧತೆ ಅರಿತು ಸದ್ದುಗದ್ದವಿಲ್ಲದೆ ಬಡ ಹೆಣ್ಮಕ್ಕಳಿಗೆ ವಿವಾಹ ಭಾಗ್ಯ ಒದಗಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಆಹಾರ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಕುಂಪಲ ನೂರಾನಿ ಯತೀಂ ಖಾನಾ ಹಾಗೂ ದಾರುಲ್ ಮಸಾಕೀನ್ ಜಂಟಿ ಆಶ್ರಯದಲ್ಲಿ 11 ಜೋಡಿಗಳ ದಾಂಪತ್ಯ ಬೆಳಕು ಕಾರ್ಯಕ್ರಮದಡಿ ಮನೆ ಯಲ್ಲೇ ನಡೆದ ಉಚಿತ ವಿವಾಹ ಸಮಾರಂಭದ ರವಿವಾರ ನಡೆದ ಸಮಾರೋಪ ಹಾಗೂ ವಧು-ವರರ ಸಮಾವೇಶದಲ್ಲಿ ಅವರು ಮಾತನಾಡಿದರು.
ತಾನು ಆಹಾರ ಸಚಿವನಾದ ಬಳಿಕ ರಾಜ್ಯದಲ್ಲಿರುವ ಎಲ್ಲಾ ಅನಾಥಾಲಯಗಳಿಗೆ ಪ್ರತಿ ತಿಂಗಳು 15 ಕೆ.ಜಿಯಂತೆ ಉಚಿತ ಅಕ್ಕಿ ನೀಡಲಾಗುತ್ತಿದ್ದು, ರಾಜ್ಯದ 8 ಸಾವಿರ ಅನಾಥಾಲಯಗಳು ಪ್ರಯೋಜನ ಪಡೆಯುತ್ತಿವೆ ಎಂದು ತಿಳಿಸಿದರು.
ಸಂದೇಶ ಭಾಷಣ ಮಾಡಿದ ಕೋಟೆಕಾರ್ ಮಖ್ದೂಮಿಯಾ ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಹಾರೂನ್ ಅಹ್ಸನಿ ಮಾತನಾಡಿ, ಹಣ, ಸಂಪತ್ತು ಇರುವವರು ಸಮಾಜದಲ್ಲಿ ಸಾಕಷ್ಟು ಮಂದಿಯಿದ್ದರೂ ಸಮಾಜಕ್ಕೆ ನೀಡುವವರು ವಿರಳ. ಇಂತಹ ಸಂಪತ್ತಿನಿಂದ ಯಾವುದೇ ಪ್ರಯೋಜನವೂ ಇಲ್ಲ. ಅದರ ಬದಲು ನಮ್ಮಲ್ಲಿರುವ ಹಣ, ಸಂಪತ್ತಿನಲ್ಲಿ ಒಂದು ಭಾಗವನ್ನು ಬಡವರಿಗಾಗಿ ಖರ್ಚು ಮಾಡುವ ವಿಶಾಲ ಮನೋಭಾವನೆ ಅಗತ್ಯ. ನಾವು ಭೂಮಿಯನ್ನು ಬಿಟ್ಟು ಹೋದ ಬಳಿಕವೂ ನಮ್ಮದಾದ ಕುರುಹು ಉಳಿಯಬೇಕಾದರೆ ಸಮಾಜಕ್ಕೆ ನೀಡುವ ಕೊಡುಗೆ ಮುಖ್ಯವಾಗುತ್ತದೆ ಎಂದರು.
ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ.ಮೋನು, ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಉದ್ಯಮಿಗಳಾದ ಎ.ಆರ್.ರಹ್ಮಾನ್, ಆಝಾದ್ ನೌಷಾದ್, ಶೌಕತ್ ಶೌರಿ, ಯು.ಕೆ.ಅಬ್ಬಾಸ್, ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಎಸ್.ಎಂ.ಆರ್.ರಶೀದ್, ಯೇನೆಪೊಯ ವೈದ್ಯಕೀಯ ಕಾಲೇಜಿನ ಸಮಾಜಕಾರ್ಯ ವಿಭಾಗದ ಅಬ್ದುಲ್ ರಝಾಕ್, ಮತ್ತಿತರರು ಉಪಸ್ಥಿತರಿದ್ದರು.
ನೂರಾನಿ ಯತೀಂ ಖಾನಾ ಅಧ್ಯಕ್ಷ ಕೆ.ಎಂ.ಅಬ್ದುಲ್ಲಾ ಸ್ವಾಗತಿಸಿದರು. ವಿವಾಹ ಸಮಿತಿ ಅಧ್ಯಕ್ಷ ಯು.ಎಸ್.ಅಬೂಬಕ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಎನ್.ಎಸ್.ಉಮರಬ್ಬ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
11 ಜೋಡಿ ದಾಂಪತ್ಯ ಜೀವನಕ್ಕೆ
ಕಳೆದ ನಾಲ್ಕು ವರ್ಷಗಳಿಂದ ಮನೆಯಲ್ಲೇ ಪ್ರಚಾರ ರಹಿತ ವಿವಾಹ ನಡೆಸುತ್ತಾ ಬಂದಿದೆ. ಈ ವರ್ಷ 11 ಹೆಣ್ಮಕ್ಕಳಿಗೆ ಮದುವೆ ಮಾಡಲಾಗಿದೆ. ಜಪ್ಪಿನ ಮೊಗರುವಿನ ಶಾಹಿದ-ಅರ್ಕುಳದ ಫಯಾಝ್, ಉಳ್ಳಾಲ ಮಾರ್ಗತಲೆಯ ಕೌಸರ್-ಮಂಚಿಯ ಅಬ್ದುಲ್ ಶಿಹಾಬ್, ಕುತ್ತಾರ್‌ನ ರುಬೀನಾ-ಇರ್ಷಾದ್, ಮುಕಚ್ಚೇರಿಯ ಸಫ್ನಾರ್-ಹೆಜಮಾಡಿಯ ಕೆ.ನವಾಝ್, ಪಾತೂರಿನ ಸಮಿಯ-ಬಾಕ್ರಬೈಲ್‌ನ ಇಸ್ಮಾಯಿಲ್ ಶರೀಫ್, ಬೋಳಿಯಾರ್‌ನ ಸಫ್ನಾರ್-ಸಜಿಪದ ಅಬ್ದುಲ್ ಜಬ್ಬಾರ್, ಗುರುಪುರದ ರಮೀಝ-ಕುಕ್ಕಾಜೆಯ ಮಹಮ್ಮದ್ ಶಬೀರ್, ಬಂಟ್ವಾಳದ ರಮೀಝ-ಪುತ್ತೂರಿನ ಹಾರಿಸ್, ನೆಕ್ಕಿಲಾಡಿಯ ಸಮೀರ-ಗೇರುಕಟ್ಟೆಯ ಮಹಮ್ಮದ್ ಅಶ್ರಫ್, ಪುತ್ತೂರಿನ ತಸ್ರೀಫ-ಮಹಮ್ಮದ್ ರಫೀಕ್ ಹಾಗೂ ಸುಳ್ಯದ ಆಯಿಶತ್ ಸಾಕೀರ-ಮಡಿಕೇರಿಯ ವಾಸೀಂ ರಫೀವುಲ್ಲಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.







