ನಾರಿಮನ್ ಹೌಸ್ ಇನ್ನು ಮುಂದೆ ಸ್ಮಾರಕ

ಮುಂಬೈ, ಜ. 14: 26/11ರ ಮುಂಬೈ ಭಯೋತ್ಪಾದಕ ದಾಳಿಗೆ ಒಳಗಾಗಿದ್ದ ನರಿಮನ್ ಹೌಸ್ ಅನ್ನು ಸ್ಮಾರಕವಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ವಾರ ಮುಂಬೈಗೆ ಭೇಟಿ ನೀಡುವ ಸಂದರ್ಭ ನರಿಮನ್ ಹೌಸ್ ಅನ್ನು ಸ್ಮಾರಕವಾಗಿ ಪರಿವರ್ತಿಸುವ ಬಗ್ಗೆ ಔಪಚಾರಿಕವಾಗಿ ಘೋಷಿಸಲಾಗುವುದು ಎನ್ನಲಾಗಿದೆ.
2008 ನವೆಂಬರ್‌ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು ನಾರಿಮನ್ ಹೌಸ್ ಮೇಲೆ ನಡೆಸಿದ ದಾಳಿಯಲ್ಲಿ ನಾರಿಮನ್ ಹೌಸ್ ನಿರ್ದೇಶಕರಾಗಿದ್ದ ಯಹೂದಿ ದಂಪತಿ ರಬ್ಬಿ ಗ್ಯಾವ್ರಿಯಲ್, ರಿವ್ಕಾ ಹೋಲ್ಟ್ಜ್‌ಬರ್ಗ್ ಹಾಗೂ ಇತರ 6 ಮಂದಿ ಮೃತಪಟ್ಟಿದ್ದರು.
ದಕ್ಷಿಣ ಮುಂಬೈಯ ಕೊಲಬಾ ಪ್ರದೇಶದಲ್ಲಿರುವ 5 ಅಂತಸ್ತಿನ ನರಿಮನ್ ಹೌಸ್ ಕಟ್ಟಡದಲ್ಲಿ ಈ ದಂಪತಿ ಚಬಾದ್-ಲುಬವಿಚ್ ಸಂಘಟನೆ ಸಾಂಸ್ಕೃತಿಕ ಹಾಗೂ ಔಟ್‌ರೀಚ್ ಕೇಂದ್ರಗಳನ್ನು ನಡೆಸುತ್ತಿದ್ದರು.
ಭಯೋತ್ಪಾದಕರ ದಾಳಿ ಸಂದರ್ಭ ಈ ದಂಪತಿಯ ಎರಡು ವರ್ಷದ ಪುತ್ರ ಮೋಶೆ ಹೋಲ್ಟ್ಜ್‌ಬರ್ಗ್‌ನನ್ನು ಭಾರತೀಯ ಸೇನೆ ರಕ್ಷಿಸಿತ್ತು. ದಾಳಿ ನಡೆದು 9 ವರ್ಷಗಳ ಬಳಿಕ ಮೊದಲ ಬಾರಿಗೆ ಅವರು ಈ ವಾರ ಇಲ್ಲಿಗೆ ಭೇಟಿ ನೀಡಲಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಇಲ್ಲಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭ ಸ್ಮಾರಕ ರೂಪಿಸಿರುವ ಚಬಾದ್-ಲುಬವಿಚ್ ಸಂಘಟನೆ ಈ ಘೋಷಣೆ ಮಾಡಲಿದೆ.