ದಾಳಿಯ ದುಸ್ಸಾಹಸ ಬೇಡ : ಜ.ರಾವತ್ ಹೇಳಿಕೆಗೆ ಪಾಕ್ ಸೇನೆ ಪ್ರತಿಕ್ರಿಯೆ

ಇಸ್ಲಾಮಾಬಾದ್,ಜ.14: ಭಾರತದಿಂದ ಉಂಟಾಗುವ ಯಾವುದೇ ಬೆದರಿಕೆ ಯನ್ನು ವಿಫಲಗೊಳಿಸಲು ತನ್ನ ಅಣ್ವಸ್ತ್ರಗಳು ಸಮರ್ಥವಾಗಿವೆಯೆಂದು ಪಾಕ್ ಸೇನೆ ರವಿವಾರ ಹೇಳಿಕೊಂಡಿದ್ದು, ಹೊಸದಿಲ್ಲಿಯು ಯಾವುದೇ ರೀತಿಯ ದುಸ್ಸಾಹಸಕ್ಕಿಳಿಯಕೂಡದೆಂದು ಎಚ್ಚರಿಕೆ ನೀಡಿದೆ.
ಪಾಕಿಸ್ತಾನವು ತನ್ನ ಅಣ್ವಸ್ತ್ರ ಸಾಮರ್ಥ್ಯದ ಬಗ್ಗೆ ಬಡಾಯಿಕೊಚ್ಚಿಕೊಳ್ಳುತ್ತಿದ್ದು, ಭಾರತ ಸರಕಾರ ಕೇಳಿಕೊಂಡಲ್ಲಿ ಗಡಿಯಾಚೆಗೆ ಯಾವುದೇ ಕಾರ್ಯಾಚರಣೆಯನ್ನು ನಡೆಸಲು ತನ್ನ ಸೇನೆ ಸಜ್ಜಾಗಿದೆಯೆಂದು ಭಾರತದ ಸೇನಾ ವರಿಷ್ಠ ಬಿಪಿನ್ ರಾವತ್ ಹೇಳಿಕೆ ನೀಡಿದ ನಾಲ್ಕು ದಿನಗಳ ಬಳಿಕ ಪಾಕ್ ಸೇನೆ ಹೀಗೆ ಪ್ರತಿಕ್ರಿಯಿಸಿದೆ.
‘ಅಣ್ವಸ್ತ್ರ ಸಾಮರ್ಥ್ಯದ ಕುರಿತಂತೆ ಪಾಕಿಸ್ತಾನವು ಬೊಗಳೆಬಿಡುವುದನ್ನು ನಾವು ಗಮನಿಸಿದ್ದೇವೆ. ಒಂದು ವೇಳೆ ಪಾಕಿಸ್ತಾನಿಗಳ ಜೊತೆ ನಿಜಕ್ಕೂ ನಮಗೆ ಸಂಘರ್ಷ ನಡೆಸಬೇಕೆಂದೆನಿಸಿದಲ್ಲಿ, ನಾವು ಗಡಿಯನ್ನು ದಾಟಿ ಹೋಗಲಾರೆವೆಂದು ಹೇಳಲು ಸಾಧ್ಯವಿಲ್ಲ. ಅವರ ಅಣ್ವಸ್ತ್ರ ಬಡಾಯಿಗೆ ನಾವು ಉತ್ತರ ನೀಡಬೇಕಾಗಿದೆ’’ ಎಂದು ರಾವತ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ರಾವತ್ ಹೇಳಿಕೆಗೆ ಇಂದು ಪ್ರತಿಕ್ರಿಯಿಸಿರುವ ಪಾಕ್ ಸೇನಾ ವಕ್ತಾರ, ಮೇಜರ್ ಜನರಲ್ ಆಸಿಫ್ ಗಫೂರ್ ಅವರು, ಒಂದು ವೇಳೆ ಭಾರತವು ಯಾವುದೇ ರೀತಿಯ ದುಸ್ಸಾಹಸಕ್ಕಿಳಿದಲ್ಲಿ , ಪಾಕ್ ಸೂಕ್ತವಾದ ಉತ್ತರ ನೀಡಲಿದೆಯೆಂದು ಎಚ್ಚರಿಕೆ ನೀಡಿದರು.
‘‘ ಒಳ್ಳೆಯದು. ಅದು (ಗಡಿದಾಟುವುದು)ಅವರ ಆಯ್ಕೆಯಾಗಿದೆ. ಒಂದು ವೇಳೆ ನಮ್ಮ ಸಂಕಲ್ಪವನ್ನು ಪರೀಕ್ಷಿಸಲು ಅವರು ಬಯಸಿದಲ್ಲಿ, ಅದಕ್ಕೆ ಅವರು ಪ್ರಯತ್ನಿಸಬಹುದು ಹಾಗೂ ಏನಾಗಲಿದೆಂಬುದನ್ನು ಅವರು ತಾವಾಗಿಯೇ ಕಾಣಬಹುದಾಗಿದೆ’’ ಎಂದು ಗಫೂರ್ ಪಾಕ್ ಸರಕಾರಿ ಸ್ವಾಮ್ಯದ ಪಿಟಿವಿಗೆ ತಿಳಿಸಿದ್ದಾರೆ.
ಪಾಕ್ ಅಣ್ವಸ್ತ್ರೀಕರಣಗೊಂಡಿರುವುದರಿಂದ ಅದರ ವಿರುದ್ಧ ಭಾರತವು ಸಾಂಪ್ರದಾಯಿಕ ಸಮರವನ್ನು ನಡೆಸುವ ಸ್ಥಿತಿಯಲ್ಲಿಲ್ಲವೆಂದು ಗಫೂರ್ ತಿಳಿಸಿದ್ದಾರೆ. ಭಾರತದಿಂದ ಹೊರಹೊಮ್ಮುವ ಯಾವುದೇ ಬೆದರಿಕೆಯನ್ನು ವಿಫಲಗೊಳಿಸಲು ಪಾಕಿಸ್ತಾನವು ವಿಶ್ವಸನೀಯವಾದ ಅಣ್ವಸ್ತ್ರ ಸಾಮರ್ಥ್ಯವನ್ನು ಹೊಂದಿದೆಯೆಂದು ಅವರು ಹೇಳಿದ್ದಾರೆ.
ಪಾಕಿಸ್ತಾನವನ್ನು ಅಸ್ಥಿರಗೊಳಿಸಲು ಭಾರತವು ಅರೆ ಸಾಂಪ್ರದಾಯಿಕ ಯುದ್ಧದ ಬೆದರಿಕೆಯನ್ನೊಡ್ಡುತ್ತಿದೆ ಹಾಗೂ ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ನಡೆಸುತ್ತಿದೆಯೆಂದು ಆಸಿಫ್ ಗಫೂರ್ ಆರೋಪಿಸಿದರು.







