ಇರಾನ್: ‘ಟೆಲಿಗ್ರಾಮ್’ ಆ್ಯಪ್ ನಿಷೇಧ ರದ್ದು
ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧ ಹಿಂತೆಗೆತ

ಟೆಹರಾನ್,ಜ.13: ಇತ್ತೀಚೆಗೆ ಭುಗಿಲೆದ್ದ ಆಡಳಿತ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಇರಾನ್‌ನ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ಆ್ಯಪ್ ಆಗಿರುವ ‘ಟೆಲಿಗ್ರಾಮ್’ಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಇರಾನಿ ಆಡಳಿತವು ರದ್ದುಪಡಿಸಿದೆ.
ಟೆಲಿಗ್ರಾಮ್ ಆ್ಯಪ್‌ನ ಕಾರ್ಯನಿರ್ವಹಣೆಯನ್ನು ರವಿವಾರದಿಂದ ಮರುಸ್ಥಾಪಿಸಲಾಗಿದೆಯೆಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ. ವಾಟ್ಸ್‌ಆಪ್ ಮಾದರಿಯ ಸಾಮಾಜಿಕ ಜಾಲತಾಣವಾದ ಟೆಲಿಗ್ರಾಮ್‌ಗೆ ಇರಾನ್‌ನಲ್ಲಿ 2.50 ಕೋಟಿ ಬಳಕೆದಾರರಿದ್ದಾರೆ. ದೇಶದ ಹದಗೆಡುತ್ತಿರುವ ಆರ್ಥಿಕತೆ ಹಾಗೂ ನಿರುದ್ಯೋಗ ಸಮಸ್ಯೆಯ ವಿರುದ್ಧ ಇರಾನ್‌ನ 12ಕ್ಕೂ ಅಧಿಕ ನಗರಗಳಲ್ಲಿ ಸುಮಾರು 5 ದಿನಗಳ ಕಾಲ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ ಟೆಲಿಗ್ರಾಮ್ ಆ್ಯಪ್‌ಗೆ ನಿಷೇಧ ಹೇರಲಾಗಿತ್ತು.
ಇರಾನ್‌ನಲ್ಲಿ ಟ್ವಿಟರ್, ಯೂಟ್ಯೂಬ್ ಹಾಗೂ ಫೇಸ್‌ಬುಕ್‌ಗಳನ್ನು ನಿಷೇಧಿಸಲಾಗಿದ್ದರೂ, ಬಳಕೆದಾರರು ಖಾಸಗಿ ವಿಪಿಎನ್ ಆ್ಯಪ್‌ಗಳ ನೆರವಿನಿಂದ ಅವುಗಳನ್ನು ಬಳಸಿಕೊಳ್ಳುತ್ತಿದ್ದರು.ಪ್ರತಿಭಟನೆಯ ಸಂದರ್ಭದಲ್ಲಿ ಇರಾನ್ ಖಾಸಗಿ ವಿಪಿಎನ್ ಆ್ಯಪ್‌ಗಳಿಗೂ ನಿಷೇಧ ವಿಧಿಸಿತ್ತಾದರೂ, ಈಗ ಅದನ್ನು ಹಿಂತೆಗೆದುಕೊಂಡಿದೆ. ಆಡಳಿತ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ ಹೇರಿಕೆ ಅನಿವಾರ್ಯವಾಗಿತ್ತು. ಆದರೆ ಅದನ್ನು ಅನಿರ್ದಿಷ್ಟಾವಧಿಗೆ ಮುಂದುವರಿಸಲಾಗುವುದಿಲ್ಲವೆಂದು ಇರಾನ್ ಅಧ್ಯಕ್ಷ ಹಸ್ಸನ್ ರೂಹಾನಿ ತಿಳಿಸಿದ್ದಾರೆ. ತನ್ನನ್ನು ವಿರೋಧಿಸುತ್ತಿರುವ ದೇಶದ ಸಂಪ್ರದಾಯವಾದಿಗಳು ಮಾಧ್ಯಮಗಳು, ಜಾಲತಾಣಗಳಿಗೆ ಸೆನ್ಸಾರ್ ಹೇರುವ ದುರುದ್ದೇಶದಿಂದ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೇಳುವಂತೆ ಮಾಡಿದ್ದಾರೆಂದು ರೂಹಾನಿ ಆರೋಪಿಸಿದ್ದಾರೆ.







