ಸೆಕ್ಸ್ ಎಂದರೆ ಸೇವೆಯೆಂದು ಹೇಳುತ್ತಿದ್ದ ದೇವಮಾನವ ದೀಕ್ಷಿತ್
ಈತ ಹೇಳುತ್ತಿದ್ದ ಹಸಿ ಹಸಿ ಸುಳ್ಳುಗಳು ಏನೇನು ಗೊತ್ತಾ ?

ಹೊಸದಿಲ್ಲಿ, ಜ.14: ಸ್ವಯಂಘೋಷಿತ ದೇವಮಾನವ ವೀರೇಂದರ್ ದೇವ್ ದೀಕ್ಷಿತ್ ರಾಜಸ್ತಾನ ಮತ್ತು ದಿಲ್ಲಿಯಲ್ಲಿ ಹೊಂದಿರುವ ಆಶ್ರಮಗಳಲ್ಲಿ ಮಹಿಳೆಯರನ್ನು ಸೆಕ್ಸ್‌ಗೆ ಬಳಸಿಕೊಳ್ಳುವುದೂ ಸೇರಿದಂತೆ ಹಲವು ಅನಾಚಾರಗಳು ನಡೆಯುತ್ತಿದ್ದ ಬಗ್ಗೆ ತನಗೆ ಹಲವು ಪತ್ರಗಳು ಬಂದಿವೆ ಎಂದು ವಕೀಲ ಶಲಭ್ ಗುಪ್ತ ತಿಳಿಸಿದ್ದಾರೆ. ‘ಫೌಂಡೇಷನ್ ಫಾರ್ ಸೋಷಿಯಲ್ ಎಂಪವರ್‌ಮೆಂಟ್’ ಎಂಬ ಎನ್‌ಜಿಒ ಸಂಸ್ಥೆಯೊಂದು ದೀಕ್ಷಿತ್ ಒಡೆತನದ ಆಶ್ರಮಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಉಲ್ಲೇಖಿಸಿ ದೀಕ್ಷಿತ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಈ ಸಂಸ್ಥೆಯನ್ನು ವಕೀಲ ಗುಪ್ತ ಪ್ರತಿನಿಧಿಸುತ್ತಿದ್ದಾರೆ. ಸೆಕ್ಸ್ ಎಂದರೆ ಸೇವೆ. ತನ್ನೊಂದಿಗೆ ಸೆಕ್ಸ್ ನಡೆಸಿದರೆ ದೇವರ ಸೇವೆ ನಡೆಸಿದಂತೆ ಎಂದು ಸ್ವಯಂಘೋಷಿತ ಬಾಬಾ ದೀಕ್ಷಿತ್ ಆಶ್ರಮದ ಹುಡುಗಿಯರನ್ನು ಲೈಂಗಿಕ ದೌರ್ಜನ್ಯಕ್ಕೆ ಗುರಿಪಡಿಸುತ್ತಿದ್ದ ಅಂಶ ಬೆಳಕಿಗೆ ಬಂದಿದೆ.
ದೀಕ್ಷಿತ್‌ನಿಂದ ದೌರ್ಜನ್ಯಕ್ಕೆ ಒಳಗಾದವರಲ್ಲಿ ಹೆಚ್ಚಿನವರು ಬ್ರಹ್ಮಕುಮಾರಿಗಳೆಂದು ಕರೆಸಿಕೊಳ್ಳುವವರು. ಉತ್ತರಪ್ರದೇಶ ಹಾಗೂ ರಾಜಸ್ತಾನದಲ್ಲಿ ಸತ್ಸಂಗ ಅಥವಾ ಗೀತಾಪಥ ಎಂಬ ಹೆಸರಿನಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಏಜೆಂಟರ ಮೂಲಕ ಅನುಯಾಯಿಗಳನ್ನು ಸಂಪರ್ಕಿಸುತ್ತಿದ್ದ. ‘ಬ್ರಹ್ಮಕುಮಾರಿ’ ಸ್ಥಾಪಕ ಲೇಖ್‌ರಾಜ್ ಕೃಪಲಾನಿ ಅವರು ದೀಕ್ಷಿತ್‌ಗೆ ಸಂಘಟನೆಯ ಹೊಣೆಯನ್ನು ವರ್ಗಾಯಿಸಿದ್ದ ಕಾರಣ ಬ್ರಹ್ಮಕುಮಾರಿಗೆ ಸೇರ್ಪಡೆಗೊಳ್ಳಬಯಸುವ ಅನುಯಾಯಿಗಳು ದೀಕ್ಷಿತ್ ನಡೆಸುವ 7 ದಿನಗಳಾವಧಿಯ ಧ್ಯಾನಶಿಬಿರದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಧ್ಯಾನಶಿಬಿರದಲ್ಲಿ ದೀಕ್ಷಿತ್‌ನ ಪ್ರಭಾವಕ್ಕೆ ಒಳಗಾಗುವ ಬ್ರಹ್ಮಕುಮಾರಿಗಳು ದೀಕ್ಷಿತ್ ನಿಜವಾಗಿಯೂ ಓರ್ವ ದೇವಮಾನವನೆಂದು ನಂಬುತ್ತಾರೆ.
ಅನುಯಾಯಿಗಳು ಕೆಲವೊಂದು ನಿಯಮಗಳನ್ನು ಪಾಲಿಸಬೇಕಿತ್ತು. ತಮ್ಮ ಸಂಗಾತಿಗಳ (ಪತಿ/ಪತ್ನಿ) ಜೊತೆ ದೈಹಿಕ ಸಂಪರ್ಕ ಮಾಡಬಾರದು, ಸರಳ ಆಹಾರ ಸೇವಿಸಬೇಕು, ಸಮಾಜದೊಂದಿಗೆ ಬೆರೆಯಬಾರದು ಇತ್ಯಾದಿ ನಿಯಮಗಳಿದ್ದವು ಎಂದು ಈ ಹಿಂದೆ ದೀಕ್ಷಿತ್ ಬಾಬಾನ ಅನುಯಾಯಿಯಾಗಿದ್ದ ಪೊಲೀಸ್ ಅಧಿಕಾರಿ ಕೆ.ಗಾರ್ಗ್ ತಿಳಿಸಿದ್ದಾರೆ.
ಬಾಬಾ ಸೂಚಿಸಿದ ಪ್ರಕಾರ ತಮ್ಮ 16 ವರ್ಷದ ಪುತ್ರಿಯನ್ನು 2003ರಲ್ಲಿ ಉತ್ತರಪ್ರದೇಶದ ಸಣ್ಣಗ್ರಾಮ ಕಂಪಿಲ್ ಎಂಬಲ್ಲದ್ದ ಆಶ್ರಮಕ್ಕೆ ಕಳಿಸಿದ್ದೆವು. ಬಾಬಾ ನಡೆಸುವ ಆಧ್ಯಾತ್ಮಿಕ ಕಾರ್ಯಕ್ರಮಗಳಿಂದ ಮಗಳ ಜ್ಞಾನಭಂಡಾರ ವೃದ್ಧಿಸುತ್ತದೆ ಎಂಬುದು ತಮ್ಮ ಅನಿಸಿಕೆಯಾಗಿತ್ತು. ಆದರೆ 2004-05ರ ಬಳಿಕ ಆಕೆಯನ್ನು ನಾವು ಮುಖತಃ ಭೇಟಿಯಾಗಲೇ ಇಲ್ಲ. ಆಶ್ರಮದಲ್ಲಿ ನಡೆಯುತ್ತಿರುವ ಎಲ್ಲಾ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ನಾವು ಹೋಗುತ್ತಿದ್ದರೂ ಮಗಳ ಭೇಟಿಯಾಗಲಿಲ್ಲ. ಒಂದೆರಡು ಬಾರಿ ಫೋನಿನಲ್ಲಿ ಮಾತನಾಡಿದ್ದೇವೆ ಎಂದು ಗಾರ್ಗ್ ತಿಳಿಸಿದ್ದಾರೆ.
ಓರ್ವ ಪೊಲೀಸ್ ಅಧಿಕಾರಿಯೇ ತನ್ನ ಪುತ್ರಿಯನ್ನು ಬಾಬಾ ದೀಕ್ಷಿತ್‌ನ ಆಶ್ರಮದಲ್ಲಿ ಪತ್ತೆಹಚ್ಚಲು ಆಗಲಿಲ್ಲ ಎಂದಾದರೆ ರಾಜಕೀಯ ವಲಯದಲ್ಲಿ ಬಾಬಾ ಎಷ್ಟರಮಟ್ಟಿಗೆ ಪ್ರಭಾವಿಯಾಗಿದ್ದಾನೆ ಎಂಬುದು ಸ್ಪಷ್ಟವಾಗುತ್ತದೆ. ಗಾರ್ಗ್ ಅವರ ಪುತ್ರಿ ನಾಪತ್ತೆಯಾಗಿರುವ ಪ್ರಕರಣದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
2020ರಲ್ಲಿ ಪ್ರಳಯ:
ದೀಕ್ಷಿತ್‌ನ ಕಾರ್ಯವಿಧಾನ ತುಂಬಾ ಸರಳವಾದುದು. 2020ರಲ್ಲಿ ಪ್ರಳಯವಾಗಿ ವಿಶ್ವವೇ ನಾಶವಾಗುತ್ತದೆ. ಪ್ರಳಯದಿಂದ ಬಚಾವಾಗಬೇಕು ಎಂದಿದ್ದರೆ ಆಶ್ರಮಕ್ಕೆ ಡೊನೇಷನ್ ನೀಡುವ ಮೂಲಕ ‘ತ್ಯಾಗ’ ಮಾಡಬೇಕು ಎಂದು ಜನರನ್ನು ನಂಬಿಸುತ್ತಿದ್ದ. ಈತನ ನಯವಾದ ಮಾತುಗಾರಿಕೆಗೆ ಮರುಳಾಗುವ ಜನತೆ ತಮ್ಮ ಆಸ್ತಿಪಾಸ್ತಿಯನ್ನು ಮಾರಿಬಂದ ಹಣವನ್ನು ಆಶ್ರಮಕ್ಕೆ ದಾನ ನೀಡಿ, ಆಶ್ರಮದಲ್ಲಿ ಅನುಯಾಯಿಗಳೆಂದು ಬದುಕು ಸಾಗಿಸುತ್ತಿದ್ದಾರೆ. ಸವಿತಾ ಎಂಬ ಮಹಿಳೆ ‘ಪ್ರಳಯದಿಂದ ಬಚಾವಾಗಲು’ ತನ್ನ ಬಳಿಯಿದ್ದ 10 ‘ಬಿಘ’ ಜಮೀನನ್ನು 10 ಲಕ್ಷ ರೂಪಾಯಿಗೆ ಮಾರಿ ಅದನ್ನು ಆಶ್ರಮಕ್ಕೆ ದೇಣಿಗೆ ನೀಡಿ ಆಶ್ರಮದ ಅನುಯಾಯಿಯಾದಳು. ಅಲ್ಲಿ ತನ್ನ ಮೇಲೆ ಬಾಬಾ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆಕೆ ದೂರಿದ್ದಾಳೆ. ಇಷ್ಟೇ ಅಲ್ಲ, ತನ್ನ ಮಗಳನ್ನೂ 2007ರಲ್ಲಿ ಬಾಬಾನ ಆಶ್ರಮಕ್ಕೆ ಒಪ್ಪಿಸಿದ್ದಳು. ಸುಮಾರು 8 ವರ್ಷದ ಬಳಿಕ, ಅವಕಾಶ ದೊರೆತೊಡನೆ ತನ್ನ ಮಗಳನ್ನು ಅಲ್ಲಿಂದ ಹೊರತರುವಲ್ಲಿ ಸವಿತಾ ಯಶಸ್ವಿಯಾಗಿದ್ದಾಳೆ.
ದೇವರನ್ನು ಹುಡುಕುತ್ತಾ ಆಶ್ರಮಕ್ಕೆ ಹೋದ ನಮಗೆ ದೆವ್ವದ ದರ್ಶನವಾಯಿತು ಎಂದು ಇದ್ದ ಭೂಮಿಯನ್ನೂ ಕಳೆದುಕೊಂಡಿರುವ ಸವಿತಾ ನಿರಾಶೆಯಿಂದ ಹೇಳುತ್ತಾಳೆ. 14ರ ಹರೆಯದ ಹುಡುಗಿಯರಿಗೆ ಆಧ್ಯಾತ್ಮಿಕ ಉಪದೇಶ ನೀಡುವ ನಿಟ್ಟಿನಲ್ಲಿ ಅವರನ್ನು ಆಕರ್ಷಿಸಿ, ಮೊದಲು ಅವರಿಗೆ ಕುಟುಂಬದ ಸಂಪರ್ಕ ಇಲ್ಲದಂತೆ ಮಾಡುತ್ತಾನೆ. ಈ ಬಾಲಕಿಯರು ಸಣ್ಣ ಬೋನಿನಂತಹ ಕ್ಯಾಬಿನ್‌ಗಳಲ್ಲಿ ಇರಬೇಕಿತ್ತು. ಪೋಷಕರು ಸಂದರ್ಶಿಸಲು ಬಂದಾಗ ಹುಡುಗಿಯರನ್ನು ದೊಡ್ಡ ಹಾಲ್‌ನಲ್ಲಿ ಒಟ್ಟು ಸೇರಿಸಲಾಗುತ್ತಿತ್ತು. ವಯಸ್ಸಾದ ಪುರುಷರು ಹಾಗೂ ಮಹಿಳೆಯರು ‘ಸೇವಾದಾರರ’(ಕಾವಲುಗಾರ) ಕರ್ತವ್ಯ ನಿರ್ವಹಿಸಬೇಕಿತ್ತು. ‘ಸೋದರಿಯರು ಹಾಗೂ ಮಾತೆಯರನ್ನು ’ ಬೀಗ ಜಡಿದ ಕೋಣೆಗಳಲ್ಲಿ ಇರಿಸಲಾಗುತ್ತಿತ್ತು. ಮುಂಜಾನೆ 2:30ರ ಹೊತ್ತಿಗೆ ಹುಡುಗಿಯರನ್ನು ಎಬ್ಬಿಸಲಾಗುತ್ತಿತ್ತು ಮತ್ತು ಅವರು ಟಿವಿಯಲ್ಲಿ ಪ್ರಸಾರವಾಗುವ ಬಾಬಾ ದೀಕ್ಷಿತ್‌ನ ಉಪನ್ಯಾಸವನ್ನು ಕೇಳಬೇಕಿತ್ತು. ಆತನ ಚಿತ್ರವನ್ನೇ ನೋಡುತ್ತಾ ಧ್ಯಾನದ ಭಂಗಿಯಲ್ಲಿ ಕೆಲವು ಗಂಟೆ ಕುಳಿತಿರಬೇಕಿತ್ತು. ಬಳಿಕ ಸ್ನಾನ ಮಾಡಿ 4 ಗಂಟೆಗೆ ಸಿದ್ಧರಾಗಬೇಕು. ದಿನವಿಡೀ ಉಪನ್ಯಾಸ ಕೇಳಬೇಕಿತ್ತು. ಹೀಗೆ ಆಶ್ರಮಕ್ಕೆ ಸೇರಿಸಿದ ತಮ್ಮ ಮಗಳು ನಾಪತ್ತೆಯಾದ ಬಗ್ಗೆ ರಾಜಸ್ತಾನದ ಕುಟುಂಬವೊಂದು ಎನ್‌ಜಿಒ ಸಂಸ್ಥೆಗೆ ದೂರು ನೀಡಿದಾಗ ಸಂಸ್ಥೆಯ ಸಲಹೆಯಂತೆ ಪೊಲೀಸರಿಗೆ ದೂರು ನೀಡಲಾಗಿದೆ. ಇದರಂತೆ ಪೊಲೀಸರು ಬಾಬಾನ ಆಶ್ರಮದ ಮೇಲೆ ದಾಳಿ ನಡೆಸಿ ಹಲವಾರು ಕಾಗದಪತ್ರಗಳನ್ನು ವಶಪಡಿಸಿಕೊಂಡಿದ್ದು, ಆಶ್ರಮದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಸೆಕ್ಸ್ ಎಂದರೆ ಸೇವೆ: ಕೆಲವೊಮ್ಮೆ ಆಶ್ರಮಕ್ಕೆ ಭೇಟಿ ನೀಡುತ್ತಿದ್ದ ದೀಕ್ಷಿತ್ ಅಲ್ಲಿದ್ದ ಹುಡುಗಿಯರಲ್ಲಿ 8ರಿಂದ 10 ಹುಡುಗಿಯರನ್ನು ಆಯ್ಕೆ ಮಾಡುತ್ತಿದ್ದ. ಅವರೆಲ್ಲಾ ಆ ರಾತ್ರಿ ದೀಕ್ಷಿತ್‌ನೊಂದಿಗೆ ‘ಗುಪ್ತ ಪ್ರಸಾದ’ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಗುಪ್ತ ಪ್ರಸಾದ ಎಂದರೆ ‘ಸೆಕ್ಸ್’ ಪದದ ಗೂಢಾರ್ಥ ಎನ್ನುತ್ತಾರೆ ಗಾರ್ಗ್ ಮತ್ತು ಸವಿತಾ. ತಾನು ಶ್ರೀಕೃಷ್ಣ ಎಂದು ಆ ಹುಡುಗಿಯರಲ್ಲಿ ಹೇಳುತ್ತಿದ್ದ ದೀಕ್ಷಿತ್ ನೀವೆಲ್ಲಾ ನನ್ನ ಪತ್ನಿಯರು ಎನ್ನುತ್ತಿದ್ದ. ಶ್ರೀಕೃಷ್ಣನ ರೀತಿ ಬಾಬಾನಿಗೂ 16,108 ಪತ್ನಿಯರು ಇದ್ದಾರೆ ಎಂದು ಆಶ್ರಮದಲ್ಲಿದ್ದ ‘ಮಾತೆ’ಯರು ಹುಡುಗಿಯರಿಗೆ ತಿಳಿಹೇಳುತ್ತಿದ್ದರು.