ಪಲಿಮಾರು ಶ್ರೀ ದ್ವಿತೀಯ ಪರ್ಯಾಯಕ್ಕೆ ಸಿದ್ಧತೆ: ಜ.18ರಂದು ಮೆರವಣಿಗೆ, ಸ್ವಾಮೀಜಿ ಪೀಠಾರೋಹಣ
ಉಡುಪಿ, ಜ.14: ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯ ದ್ವಿತೀಯ ಪರ್ಯಾಯ ಮಹೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಸ್ವಾಮೀಜಿ ಜ.18ರಂದು ಬೆಳಗ್ಗೆ 6.35ರ ಸುಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣಗೈಯಲಿದ್ದಾರೆ.
ಸ್ವಾಗತ ಸಮಿತಿಯ ಕಾರ್ಯಾಲಯದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಕಾರ್ಯದ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ಈ ಬಗ್ಗೆ ಮಾಹಿತಿ ನೀಡಿದರು. ಪರ್ಯಾಯ ಮಹೋತ್ಸವದ ಪ್ರಯುಕ್ತ ಉಡುಪಿ ನಗರವಿಡೀ ವಿಶಿಷ್ಟವಾದ ವಿದ್ಯುತ್ ದೀಪಾಲಂಕಾರ, ಧ್ವಜಗಳು, ಸ್ವಾಗತ ಕಮಾನು ಗಳು ಇತ್ಯಾದಿಗಳಿಂದ ಅಲಂಕೃತಗೊಂಡಿದೆ ಎಂದರು.
ಜ.17ರಂದು ಸಂಜೆ 7 ಗಂಟೆಗೆ ರಥಬೀದಿಯ ಶ್ರೀಪರವಿದ್ಯಾ ಮಂಟಪದಲ್ಲಿ ಐತಿಹಾಸಿಕ ಪಂಚಮ ಪರ್ಯಾಯ ಮುಗಿಸಿದ ಪೇಜಾವರ ಶ್ರೀವಿಶ್ವೇಶತೀರ್ಥ ಹಾಗೂ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ಪಲಿಮಾರು ಮಠಾಧೀಶರ ಅಧ್ಯಕ್ಷತೆಯಲ್ಲಿ ಅಭಿನಂದಿಸಲಾಗುವುದು. ರಾತ್ರಿ 8ಗಂಟೆಯಿಂದ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ.
ಜ.18ರಂದು ನಸುಕಿನ ವೇಳೆ 3 ಗಂಟೆಗೆ ನಗರದ ಜೋಡುಕಟ್ಟೆಯಿಂದ ಪರ್ಯಯೋತ್ಸವದ ಮೆರವಣಿಗೆ ಪಲಿಮಾರು ಮಠದ ಪಟ್ಟದ ದೇವರು ಹಾಗೂ ಅಷ್ಟಮಠಾಧೀಶರೊಂದಿಗೆ ಕೆ.ಎಂ.ಮಾರ್ಗವಾಗಿ ಕನಕದಾಸ ರಸ್ತೆಯ ಮೂಲಕ ರಥಬೀದಿ ತಲುಪಲಿದೆ. ಮೆರವಣಿಗೆಯಲ್ಲಿ ಆಕರ್ಷಕವಾದ ಸುಮಾರು 15 ಕ್ಕೂ ಅಧಿಕ ಟ್ಯಾಬ್ಲೋಗಳು ಹಾಗೂ 60ಕ್ಕೂ ಹೆಚ್ಚು ಜಾನಪದ ಮತ್ತು ಕಲಾ ತಂಡಗಳು ಭಾಗವಹಿಸಲಿವೆ.
ಬೆಳಗಿನ ಜಾವ 6.35ರ ಸುಮಾರಿಗೆ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣಗೈಯಲಿರುವರು. ತದನಂತರ ರಾಜಾಂಗಣದಲ್ಲಿ ವೈಭವದ ಪರ್ಯಾಯ ದರ್ಬಾರ್ ಜರಗಲಿದೆ. ಇದರಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಪಲಿಮಾರು ಶ್ರೀವಿದ್ಯಾಧೀಶತಿೀರ್ಥ ಸ್ವಾಮೀಜಿ ಅಭಿನಂದಿಸಲಿರುವರು.
ನಂತರ ಶ್ರೀಕೃಷ್ಣನಿಗೆ ಲಕ್ಷತುಳಸಿ ಅರ್ಚನೆಯೊಂದಿಗೆ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯ ದ್ವಿತೀಯ ಪರ್ಯಾಯದ ಪ್ರಥಮ ಮಹಾಪೂಜೆಯನ್ನು ನೆರ ವೇರಿಸಲಿರುವರು. ಅದೇ ದಿನ ಬೆಳಗ್ಗೆ ಸ್ವಾಮೀಜಿಯ ಸಂಕಲ್ಪದಂತೆ 2 ವರ್ಷ ಗಳ ಅಖಂಡ ಭಜನಾ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮಹಾಪೂಜಾ ನಂತರ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 5ಗಂಟೆಗೆ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಭಾಗವಹಿಸಲಿರುವರು. ಅಂದಿನಿಂದ ಜ.29ರ ವರೆಗೆ ಸಂಜೆ ಏಳು ಗಂಟೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಿತಿಯ ವತಿಯಿಂದ ಜರಗಲಿದೆ. ಪರ್ಯಾಯದ ಪ್ರಯುಕ್ತ ಜ.17ರ ಸಂಜೆ 7ಗಂಟೆ ಯಿಂದ ಜ.18ರ ಬೆಳಗ್ಗೆ 7ಗಂಟೆಯವರೆಗೆ ನಗರದ ಪ್ರಮುಖ ರಸ್ತೆಯನ್ನು ಸಂಚಾರ ಮುಕ್ತವನ್ನಾಗಿಸುವುದಾಗಿ ಜಿಲ್ಲಾಧಿಕಾರಿಗಳು ಘೋಷಿಸಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಹರಿನಾರಾಯಣದಾಸ ಅಸ್ರಣ್ಣ, ಪ್ರಧಾನ ಕಾರ್ಯದರ್ಶಿಗಳಾದ ಮಟ್ಟು ಲಕ್ಷೀನಾರಾಯಣ ರಾವ್, ಕೆ.ಪದ್ಮನಾಭ ಭಟ್, ಖಜಾಂಚಿ ರಮೇಶ್ ರಾವ್ ಬೀಡು, ಅಧ್ಯಕ್ಷ ಶ್ರೀಧರ್ ಭಟ್, ಮೆರವಣಿಗೆ ಸಮಿತಿ ಸಂಚಾಲಕ ಬೈಕಾಡಿ ಸುಪ್ರಸಾದ ಶೆಟ್ಟಿ, ಜತೆ ಕಾರ್ಯದರ್ಶಿ ಗಳಾದ ವಿಷ್ಣುಪ್ರಸಾದ್ ಪಾಡಿಗಾರ್, ವಿಷ್ಣು ಅಚಾರ್ಯ, ವೆಂಕಟರಮಣ ಮುಚ್ಚಿಂತಾ್ತಯ, ವಿಜಯ ರಾಘವ ಉಪಸ್ಥಿತರಿದ್ದರು.







