ಎಸ್‌ಎಫ್‌ಐ ಕಾರ್ಯದರ್ಶಿಯ ಭಾವಚಿತ್ರ ದುರ್ಬಳಕೆ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ

ಮಂಗಳೂರು, ಜ. 14: ಎಸ್‌ಎಫ್‌ಐ ಸಂಘಟನೆಯ ದ.ಕ. ಜಿಲ್ಲಾ ಕಾರ್ಯದರ್ಶಿ ಮಾಧುರಿ ಬೋಳಾರ ಅವರ ಭಾವಚಿತ್ರವನ್ನು ದುರುಪಯೋಗ ಮಾಡಿ ಬೆದರಿಕೆಯ ಸಂದೇಶವನ್ನು ಕಳುಹಿಸಿದ್ದ ಆರೋಪದಲ್ಲಿ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ ಹರಿ ಯಾನೆ ಹರೀಶ್ ದೇವಾಡಿಗ ಯಾನೆ ಕಕ್ಕಿಂಜೆ ಹರೀಶ್ (22) ಬಂಧಿತ ಆರೋಪಿ.
ಈತನನ್ನು ಪೊಲೀಸರು ಶನಿವಾರ ಪಂಪ್‌ವೆಲ್ ಬಳಿಯಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಲಾಗಿದ್ದ ಮೊಬೈಲ್ ಹ್ಯಾಂಡ್‌ಸೆಟ್‌ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಎಸ್‌ಎಫ್‌ಐ ಸಂಘಟನೆಯ ಕಾರ್ಯಕರ್ತೆ ಮಾಧುರಿ ಬೋಳಾರ ಹಾಗೂ ಇತರರು ಸಂಘಟನೆಯ ಕೆಲಸದ ನಿಮಿತ್ತ ಹೋಗುವಾಗ ಜೊತೆಯಾಗಿ ತೆರೆದಿ ರುವ ಭಾವಚಿತ್ರವನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದು, ಅದನ್ನು ಕೆಲವೊಂದು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಂಡು ಈ ಭಾವಚಿತ್ರದ ಜೊತೆಗೆ ಬೆದರಿಕೆಯ ಸಂದೇಶಗಳನ್ನು ಹಾಕುತ್ತಿದ್ದಾರೆ ಎಂದು ಮಾಧುರಿ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.
ಮಾಧುರಿಯವರು ನೀಡಿರುವ ದೂರಿನಂತೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಜ. 9ರಂದು ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಕೈಗೆತ್ತಿಕೊಂಡ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.







