ಮಹಿಳೆಯ ಡೆಬಿಟ್ ಕಾರ್ಡ್ ಕದ್ದು ಹಣ ಶಾಪಿಂಗ್ ಮಾಡಿದ ಕಳ್ಳರು !

ಚಂಡೀಗಡ, ಜ.14: ಕಾರಿನಲ್ಲಿಟ್ಟಿದ್ದ ಪರ್ಸ್‌ನಲ್ಲಿದ್ದ ಡೆಬಿಟ್ ಕಾರ್ಡ್ ಬಳಸಿದ ದುಷ್ಕರ್ಮಿಗಳು 63,000 ರೂ. ಮೊತ್ತದ ವಸ್ತುಗಳನ್ನು ಖರೀದಿಸಿ ಹಣ ಪಾವತಿಸಿದ ಘಟನೆ ಚಂಡೀಗಡದಲ್ಲಿ ನಡೆದಿದೆ.
ಸೆಕ್ಟರ್ 22ರ ನಿವಾಸಿಯಾಗಿರುವ 61ರ ಹರೆಯದ ಆಶಾ ರಾಣಿ ಎಂಬವರು ಸೆಕ್ಟರ್ 21ರ ಕಮ್ಯುನಿಟಿ ಸೆಂಟರ್ ಬಳಿ ತನ್ನ ಕಾರನ್ನು ಪಾರ್ಕ್ ಮಾಡಿ, ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಗ ಅವರ ಕಾರಿನಲ್ಲಿದ್ದ ಪರ್ಸನ್ನು ಎಗರಿಸಿದ್ದ ದುಷ್ಕರ್ಮಿಗಳು ಅದರಲ್ಲಿದ್ದ 3 ಡೆಬಿಟ್ ಕಾರ್ಡ್‌ಗಳನ್ನು ಬಳಸಿ 63,000 ರೂ. ಹಣ ಪಾವತಿ ಮಾಡಿದ್ದು, ಪರ್ಸನ್ನು ಕಾರಲ್ಲೇ ಇಟ್ಟಿದ್ದಾರೆ. (ಪರ್ಸ್‌ನಲ್ಲಿದ್ದ ಚೀಟಿಯಲ್ಲಿ ಡೆಬಿಟ್ ಕಾರ್ಡ್ ಗುಪ್ತ ಸಂಖ್ಯೆ ಬರೆದಿದ್ದರು).
ಆದರೆ ಹಣ ಕಳವಾಗಿರುವ ವಿಷಯ ಸಂಜೆಯವರೆಗೆ ಗೊತ್ತಾಗಲಿಲ್ಲ. ಸಂಜೆ ಅಂಗಡಿಯಿಂದ ವಸ್ತುಗಳನ್ನು ಖರೀದಿಸಿ ಹಣ ಪಾವತಿಸಲು ಪರ್ಸ್ ತೆಗೆದಾಗ ಡೆಬಿಟ್ ಕಾರ್ಡ್ ಕಾಣೆಯಾಗಿರುವುದು ತಿಳಿದಿದೆ. ಅಲ್ಲದೆ ತನ್ನ ಖಾತೆಯಿಂದ 63,000 ಹಣ ಡ್ರಾ ಮಾಡಿರುವ ಸಂದೇಶವೂ ಮೊಬೈಲ್‌ಗೆ ಬಂದಿದೆ ಎಂದು ಮಹಿಳೆ ದೂರು ನೀಡಿದ್ದಾರೆ.