ಆಧಾರ್ ಕಡ್ಡಾಯದಿಂದ ಮೂಲಭೂತ ಹಕ್ಕುಗಳಿಗೆ ಅಪಾಯ: ಆ್ಯಮ್ನೆಸ್ಟಿ

ಹೊಸದಿಲ್ಲಿ, ಜ.14: ಸರಕಾರವು ಆಧಾರ್‌ಅನ್ನು ಕಡ್ಡಾಯಗೊಳಿಸಲು ಹೊರಟಿರುವುದರಿಂದ ಕೋಟ್ಯಂತರ ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಹುದು ಮತ್ತು ಅದರಿಂದ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಆಗುತ್ತದೆ. ಆಧಾರ್ ಕಡ್ಡಾಯದಿಂದ ಖಾಸಗಿತನದ ಹಕ್ಕಿನ ಉಲ್ಲಂಘನೆಯೂ ಆಗುತ್ತದೆ ಎಂದು ಆ್ಯಮ್ನೆಸ್ಟಿ ಅಂತಾರಾಷ್ಟ್ರೀಯದ ಭಾರತ ವಿಭಾಗ ಮತ್ತು ಮಾನವ ಹಕ್ಕು ನಿಗಾ ಸಂಸ್ಥೆಯು ತಿಳಿಸಿದೆ.
ಸರಕಾರವು ಆಧಾರ್ ಸಂಬಂಧಿ ದೂರುಗಳನ್ನು ಸ್ವತಂತ್ರವಾಗಿ ತನಿಖೆ ನಡೆಸಲು ಆದೇಶ ನೀಡಬೇಕು ಮತ್ತು ಆಧಾರ್‌ನ ಹುಳುಕುಗಳನ್ನು ಬಹಿರಂಗ ಮಾಡುವ ಪತ್ರಕರ್ತರ ಮತ್ತು ಸಂಶೋಧಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಸಂಸ್ಥೆ ತಿಳಿಸಿದೆ.
ಆಧಾರ್ ಹೊಂದಿರುವ ಜನರ ಮಾಹಿತಿಯನ್ನು ಕೇವಲ 500 ರೂ. ಪಾವತಿ ಮಾಡುವ ಮೂಲಕ ಪಡೆದುಕೊಳ್ಳಬಹುದು ಎಂದು ಕಳೆದ ವಾರ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿತ್ತು. ಪರಿಣಾಮವಾಗಿ ಆ ಪತ್ರಿಕೆ ಮತ್ತು ವರದಿಗಾರರ ವಿರುದ್ಧ ಯುಐಡಿಎಐಯು ಕ್ರಿಮಿನಲ್ ದೂರು ದಾಖಲಿಸಿತ್ತು. ಆಧಾರ್ ಪ್ರಾಧಿಕಾರದ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಆಗಸ್ಟ್ 2017ರಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನ ಪ್ರಕಾರ ಖಾಸಗಿತನದ ಹಕ್ಕು ಕೂಡಾ ಜೀವನ ಮತ್ತು ಖಾಸಗಿ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕಿನ ಭಾಗವೇ ಆಗಿದೆ ಮತ್ತು ಅದನ್ನು ಭಾರತವೂ ಭಾಗವಾಗಿರುವ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತಾರಾಷ್ಟ್ರೀಯ ಒಡಂಬಡಿಕೆಯ ಮೂಲಕ ರಕ್ಷಿಸಲಾಗಿದೆ ಎಂದು ಎರಡು ಸಂಸ್ಥೆಗಳು ಜಂಟಿಯಾಗಿ ನೀಡಿರುವ ಹೇಳಿಕೆಯಲ್ಲಿ ತಿಳಿಸಿವೆ. ಆ್ಯಮ್ನೆಸ್ಟಿ ಅಂತಾರಾಷ್ಟ್ರೀಯದ ಭಾರತದ ಕಾರ್ಯಕಾರಿ ನಿರ್ದೇಶಕರಾದ ಆಕರ್ ಪಟೇಲ್ ಹೇಳುವಂತೆ, ಅಗತ್ಯ ಸೇವೆಗಳು ಮತ್ತು ಲಾಭಗಳನ್ನು ಪಡೆಯಲು ಆಧಾರ್‌ಅನ್ನು ಕಡ್ಡಾಯಗೊಳಿಸಿರುವುದರಿಂದ ಜನರ ಆಹಾರದ ಹಕ್ಕು, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ಹಲವಾರು ಸಾಂವಿಧಾನಿಕ ಹಕ್ಕುಗಳಿಗೆ ತಡೆಯೊಡ್ಡಿದಂತಾಗುತ್ತದೆ.