ಉದ್ಯಮಿ ಅಪಹರಣ: ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆಯ ಬಂಧನ

ಬೆಂಗಳೂರು ಜ.14: ಉದ್ಯಮಿಯೊಬ್ಬರ ಅಪಹರಣ ಆರೋಪ ಪ್ರಕರಣ ಸಂಬಂಧ ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸೇರಿ ನಾಲ್ವರನ್ನು ನಗರದ ಈಶಾನ್ಯ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಅರ್ಷಿಯಾ ಆಲಿ (32), ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಬಾಗಲೂರು ರಸ್ತೆ ಶ್ರೀನಿವಾಸ್ ಗಾರ್ಡನ್‌ನ ರೇಣುಕಾಪ್ರಸಾದ್ (41), ಎಚ್‌ಬಿಆರ್ ಲೇಔಟ್‌ನ 5ನೆ ಮುಖ್ಯರಸ್ತೆ ನಿವಾಸಿ ಕಾಂತರಾಜ್‌ಗೌಡ (30) ಮತ್ತು ಹೊರಮಾವು ನಿವಾ ಕಾಂತರಾಜು, ಕಾರು ಚಾಲಕ ಪ್ರದೀಪ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ಮಲ್ಲಿಕಾರ್ಜುನ್ ಎಂಬವರು ರಿಯಲ್ ಎಸ್ಟೇಟ್, ರೇಷ್ಮೆ ವ್ಯವಹಾರ ಹಾಗೂ ಲೇವಾದೇವಿ ವ್ಯವಹಾರ ನಡೆಸುತ್ತಿದ್ದರು. ಇವರ ಪುತ್ರ ಡಾ. ರವಿಕುಮಾರ್ ವೈದ್ಯರಾಗಿದ್ದು, ಅವರೊಂದಿಗೆ ಯಲಹಂಕದ ಮಾರುತಿನಗರದಲ್ಲಿ ವಾಸವಿದ್ದರು ಎನ್ನಲಾಗಿದೆ.
ಮಲ್ಲಿಕಾರ್ಜುನ್ ಅವರನ್ನು ಅಪಹರಿಸಿ ಹಣ ದೋಚಲು ಅರ್ಷಿಯಾ ಹಾಗೂ ರೇಣುಕಾಪ್ರಸಾದ್ ಸಂಚು ರೂಪಿಸಿದ್ದರು. ಜ.11ರಂದು ಮಲ್ಲಿಕಾರ್ಜುನ್ ವಾಯು ವಿಹಾರಕ್ಕೆಂದು ಪಾರ್ಕ್‌ಗೆ ಕಾರಿನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಕಾಂತರಾಜು ಮತ್ತು ಪ್ರದೀಪ್ ಅಡ್ಡಗಟ್ಟಿ ಅಪಹರಿಸಿದ್ದರು ಎಂದು ತಿಳಿದುಬಂದಿದೆ.
ಬಳಿಕ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಗೋಡೋನ್‌ನಲ್ಲಿ ಇಟ್ಟಿದ್ದರು. ಬಳಿಕ ಅರ್ಷಿಯಾ ತನ್ನ ಕಾರಿನಲ್ಲಿ ರೇಣುಕಾಪ್ರಸಾದ್ ಜತೆ ತೆರಳಿದ್ದರು. ನಂತರ ಮಲ್ಲಿಕಾರ್ಜುನ್ ಅವರ ಪುತ್ರ ಡಾ.ರವಿಕುಮಾರ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದಲ್ಲಿ ನಿಮ್ಮ ತಂದೆಯನ್ನು ಕೊಲ್ಲುವುದಾಗಿ ಬೆದರಿಸಿದ್ದರು ಎಂದು ಹೇಳಲಾಗುತ್ತಿದೆ.
ಇದರಿಂದ ಆತಂಕಗೊಂಡ ರವಿಕುಮಾರ್ 59 ಲಕ್ಷ ರೂ. ಹೊಂದಿಸಿಕೊಟ್ಟು ತಂದೆಯನ್ನು ಬಿಡಿಸಿಕೊಂಡು ಬಂದು ಯಲಹಂಕ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆಗಿಳಿದ ಡಿಸಿಪಿ ಗಿರೀಶ್ ನೇತೃತ್ವದ ತಂಡ ಆರೋಪಿಗಳು ಕರೆ ಮಾಡಿದ್ದ ಮೊಬೈಲ್ ಸಂಖ್ಯೆ ಮತ್ತು ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿ ತಡರಾತ್ರಿ ಆರೋಪಿಗಳನ್ನು ಅವರ ಮನೆಯಲ್ಲೇ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಲ್ಲಿಕಾರ್ಜುನ್ ಅವರನ್ನು ಅಪಹರಿಸಲು 1 ತಿಂಗಳಿಂದ ಸಂಚು ರೂಪಿಸಿದ್ದರು. ಕಾರು ಚಾಲಕ ರಜೆ ಇದ್ದ ಕಾರಣ ಮಲ್ಲಿಕಾರ್ಜುನ್ ಅವರು ತಾವೇ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಈ ವೇಳೆ ಅಪಹರಣ ಮಾಡಲಾಗಿತ್ತು ಎನ್ನಲಾಗಿದೆ.ಆರೋಪಿಗಳಿಂದ ಒಟ್ಟು 1.4 ಕೋಟಿ ನಗದು, ಕೃತ್ಯಕ್ಕೆ ಬಳಸಿದ್ದ 2 ಕಾರು, 2 ಪಿಸ್ತೂಲ್, 6 ಜೀವಂತ ಗುಂಡು, 3 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಅಲ್ಲದೆ, ಈ ಹಿಂದೆ ಒಂದು ಕೋಟಿ ನೋಟು ಅಮಾನ್ಯೀಕರಣ ಪ್ರಕರಣದಲ್ಲಿ ಕಾಂತರಾಜುವನ್ನು ಅಶೋಕನಗರ ಪೊಲೀಸರು ಬಂಧಿಸಿದ್ದರು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರೇಣುಕಾಪ್ರಸಾದ್ ವಿರುದ್ಧ ವಿಶ್ವನಾಥಪುರದಲ್ಲಿ ವಂಚನೆ ಪ್ರಕರಣವೊಂದು ದಾಖಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಪಕ್ಷದಿಂದ ವಜಾ
ಜೆಡಿಎಸ್‌ನ ಪ್ರಾಥಮಿಕ ಸದಸ್ಯತ್ವ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷ ಸ್ಥಾನದಿಂದ ಅರ್ಷಿಯಾ ಆಲಿ ಅವರನ್ನು ವಜಾಗೊಳಿಸಲಾಗಿದೆ. ಜೆಡಿಎಸ್‌ನ ತತ್ವ ಸಿದ್ದಾಂತಕ್ಕೆ ವಿರುದ್ದವಾಗಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ ಅರ್ಷಿಯಾ ಆಲಿ ಅವರನ್ನು ವಜಾಗೊಳಿಸಿರುವುದಾಗಿ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಖ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







