ಕೊಂಕಣಿಯನ್ನು ಭಾಷಾ ದೃಷ್ಟಿಯಿಂದ ನೋಡೋಣ: ಎಚ್ಚೆಮ್

ಮಂಗಳೂರು, ಜ. 14: ಕೊಂಕಣಿಯನ್ನು ಧರ್ಮ, ಜಾತಿ, ಗಣ್ಯ ವ್ಯಕ್ತಿಗಳ ಪರಿಚಯದ ಆಧಾರದಲ್ಲಿ ಗುರುತಿಸುವ ಬದಲು ಅದನ್ನು ಭಾಷೆಯಾಗಿಯೇ ನೋಡಬೇಕು ಎಂದು ನಗರದ ಕೊಂಕಣಿ ಲೇಖಕ, ಪತ್ರಕರ್ತ, ವಿಮರ್ಶಕ ಎಚ್ಚೆಮ್ ಪೆರ್ನಾಳ್ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಕೊಂಕಣಿ ಭಾಗವು ಜನವರಿ ತಿಂಗಳ ಸರಣಿ ಉಪನ್ಯಾಸ ಕಾರ್ಯದ-2ನೆ ಭಾಗವಾಗಿ ವಿಶ್ವ ಯುವ ದಿನದಂದು ಸಂಜೆ ‘ಕೊಂಕಣಿ ಸಾಹಿತ್ಯ ವಿಮರ್ಶೆ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.
ಗೋಪಾಲಕೃಷ್ಣ ಅಡಿಗರಂತಹ ಕವಿ, ಬರಹಗಾರರರನ್ನು ಸಾರಸ್ವತ ಲೋಕಕ್ಕೆ ಪರಿಚುಸಿದ್ದು ಡಾ. ಯು. ಆರ್. ಅನಂತಮೂರ್ತಿಯವರು. ದ. ರಾ. ಬೇಂದ್ರೆಯಂತಹ ಕವಿಗೆ ಮಾರ್ಗದರ್ಶಕರಾಗಿದ್ದವರು ಕೀರ್ತಿನಾಥ ಕುರ್ತಕೋಟಿಯವರು. ಕೊಂಕಣಿಯಲ್ಲಿಯೂ ಇಂಥಹ ಪರಂಪರೆ ಬರಲು ಇನ್ನೂ ಐದಾರು ವರ್ಷಗಳೇ ಬೇಕಾಗಬಹುದು. ಅಂತಹ ವಿಮರ್ಶಾ ಸಾತ್ಯವನ್ನು ವೃದ್ಧಿಸುವ ಜವಾಬ್ದಾರಿ ಸ್ನಾತಕೋತ್ತರ ಕೊಂಕಣಿ ವಿಭಾಗದ ವಿದ್ಯಾರ್ಥಿಗಳ ಮೇಲಿದೆ ಎಂದವರು ಹೇಳಿದರು.
ಸ್ನಾತಕೋತ್ತರ ಕೊಂಕಣಿ ವಿಭಾಗದ ಸಂಯೋಜಕ ಡಾ. ಅರವಿಂದ ಶ್ಯಾನಭಾಗ್ ಅವರು ಪ್ರಾಸ್ತಾಕವಾಗಿ ಮಾತನಾಡಿ, ಸ್ವಾಮಿ ವಿವೇಕಾನಂದರು ಮತ್ತು ರಾಮಕೃಷ್ಣ ಪರಮಹಂಸರಲ್ಲಿ ಸಮಾನಶೀಲತೆಯಿಂದ ನೋಡುವ ಪರಿಪಾಠ ಬಂದಿದ್ದು ಗುರುಶಿಷ್ಯರ ಅದ್ಭುತ ಪರಂಪರೆಯ ಮೂಲಕ. ಅಂತೆಯೇ ವಿಮರ್ಶಾಕ್ಷೇತ್ರಕ್ಕೆ ಕಾಲಿಟ್ಟರೆ ಪಾಶ್ಚಾತ್ಯ ಮೀಮಾಂಸೆಯು ಅರಿಸ್ಟಾಟಲ್ ಮತ್ತು ಸಾಕ್ರೆಟೀಸ್‌ರಂಥ ಗುರುಶಿಷ್ಯರ ಮೂಲಕವೇ ವಿಮರ್ಶಾ ಕ್ಷೇತ್ರ ಜಗತ್ಪ್ರಸಿದ್ದವಾಯಿತು ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಕರ್ನಾಟಕ ಕೊಂಕಣಿ ಭಾಷಾ ಮಂಡಳದ ಉಪಾಧ್ಯಕ್ಷ ಎಂ. ಆರ್. ಕಾಮತ್ ಅವರು ಸಂಧ್ಯಾ ಕಾಲೇಜಿನಲ್ಲಿ ಸ್ನಾತಕೋತ್ತರ ಕೊಂಕಣಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದಿನದ ಹೊತಿತಿನಲ್ಲಿ ದುಡಿಮೆಯ ಜೊತೆಗೆ ಸಂಜೆ 5 ರಿಂದ ರಾತ್ರಿ 9 ರವರೆಗೆ ಬಂದು ತರಗತಿಗಳಲ್ಲಿ ಕುಳಿತುಕೊಂಡು ಪಾಠ ಕೇಳಿಸಿಕೊಳ್ಳುವ ಅವರ ಕ್ಷಮತೆಯನ್ನು ಶ್ಲಾಘಿಸಿದರಲ್ಲದೆ, ತನಗೂ ಎಂ.ಎ. ಕೊಂಕಣಿ ಅಭ್ಯಸಿಸುವ ಮನಸ್ಸಿತ್ತು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಣಿ ಶ್ರೀವತ್ಸ ಅವರು, ಕೊಂಕಣಿ ಎಂ.ಎ. ಪಠ್ಯ ಕ್ರಮದಲ್ಲಿರುವ ಸಾಹಿತ್ಯ ವಿಮರ್ಶೆ ವಿಷಯದ ಕುರಿತಾಗಿ ಆಯೋಜಿಸಿದ ಈ ವಿಶೇಷ ಉಪನ್ಯಾಸವು ಪ್ರಗತಿಪರ ವಿಮರ್ಶಕರನ್ನು ಹುಟ್ಟು ಹಾಕಬೇಕೆಂದರು.
ಕಾರ್ಯಕ್ರಮದಲ್ಲಿ ಜಾಗೃತಿಪೂರ್ಣ ಉಪನ್ಯಾಸದೊಂದಿಗೆ ಕೊಂಕಣಿ ವಿಮರ್ಶಾ ಕ್ಷೇತ್ರದ ಅಪರೂಪದ ಚರ್ಚೆ ನಡೆಯಿತು. ವಿದ್ಯಾ ಬಾಳಿಗಾ ಕಾರ್ಯ ಕ್ರಮವನ್ನು ನಿರೂಪಿಸಿದರು. ಗುರುಮೂರ್ತಿ ಮತ್ತು ಕಾಮಾಕ್ಷಿ ಆಚಾರ್ಯ ಸ್ವಾಗತಿಸಿದರು.







