ಬಶೀರ್ ಹತ್ಯೆ ಪ್ರಕರಣ: ಇನ್ನಿಬ್ಬರು ಆರೋಪಿಗಳು ವಶಕ್ಕೆ

ಮಂಗಳೂರು, ಜ. 14: ಕೊಟ್ಟಾರ ಚೌಕಿ ಬಳಿ ನಡೆದ ಅಬ್ದುಲ್ ಬಶೀರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ನಗರ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾಸರಗೋಡು ಮೊಗ್ರಾಲ್‌ನ ಲತೀಶ್ (24) ಮತ್ತು ಕಾಸರಗೋಡು ವಿದ್ಯಾನಗರದ ಪುಷ್ಪರಾಜ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಕೊಲೆ ಕೃತ್ಯದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳಾದ ಶ್ರೀ ಜಿತ್ ಪಿ.ಕೆ ಯಾನೆ ಶ್ರೀಜು, ಕಿಶನ್ ಪೂಜಾರಿ, ಧನುಷ್ ಪೂಜಾರಿ ಮತ್ತು ಸಂದೇಶ್ ಕೋಟ್ಯಾನ್ ಎಂಬವರನ್ನು ಮಂಗಳೂರು ಸಿಸಿಬಿ ಪೊಲೀಸರು ಈ ಹಿಂದೆ ದಸ್ತಗಿರಿ ಮಾಡಿದ್ದರು. ಆರೋಪಿಗಳನ್ನು ಸಮಗ್ರ ತನಿಖೆ ನಡೆಸಿದಾಗ ಈ ಕೊಲೆ ಕೃತ್ಯದಲ್ಲಿ ಇತರರು ಕೂಡಾ ಭಾಗಿಯಾದ ಬಗ್ಗೆ ತಿಳಿದುಬಂದಿದೆ.
ಜ. 3ರಂದು ರಾತ್ರಿ ಸುಮಾರು 10 ಗಂಟೆಗೆ ಕೊಟ್ಟಾರ ಚೌಕಿ ಬಳಿ ಫಾಸ್ಟ್‌ಫುಡ್ ವ್ಯಾಪಾರವನ್ನು ನಡೆಸುತ್ತಿದ್ದ ಅಬ್ದುಲ್ ಬಶೀರ್ ಅವರು ಅಂಗಡಿ ಬಂದ್ ಮಾಡಿ ಹೋಗುವ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಶೀರ್ ಜ. 7ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಈ ಬಗ್ಗೆ ಬಶೀರ್ ಅವರ ಸಹೋದರ ಅಬ್ದುಲ್ ಲತೀಫ್ ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಶಾಂತಾರಾಮ್, ಪಿಎಸ್‌ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.







