ವಿದೇಶಗಳಲ್ಲಿ ಆಶ್ರಯ ಕೋರುವ ಭಾರತೀಯರಿಗೆ ಪಾಸ್ಪೋರ್ಟ್ ನಿರಾಕರಿಸಲು ಸಾಧ್ಯವಿಲ್ಲ: ಹೈಕೋರ್ಟ್

ಹೊಸದಿಲ್ಲಿ, ಜ. 14: ವಿದೇಶಗಳಲ್ಲಿ ಆಶ್ರಯ ಕೋರಿರುವ ಏಕೈಕ ಕಾರಣಕ್ಕೆ ಭಾರತೀಯ ನಾಗರಿಕರಿಗೆ ಪಾಸ್ಪೋರ್ಟ್ ನಿರಾಕರಿಸಲು ಸಾಧ್ಯವಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಹೇಳಿದೆ.
ವಿದೇಶಗಳಲ್ಲಿ ಆಶ್ರಯ ಕೋರಿದ ಮೂವರಿಗೆ ಪಾಸ್ಪೋರ್ಟ್ ನಿರಾಕರಿಸಿದ ಸರಕಾರದ ನಿರ್ಧಾರ ರದ್ದುಗೊಳಿಸಿದ ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಕೇಂದ್ರ ಸರಕಾರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಹಾಗೂ ಸಂಜೀವ್ ಸಚ್ಚದೇವ್ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಏಕ ಸದಸ್ಯ ಪೀಠದ ತೀರ್ಪು ಎತ್ತಿ ಹಿಡಿದಿರುವ ಪೀಠ, ಪಾಸ್ಪೋರ್ಟ್ ನಿರಾಕರಿಸಲು ‘ಪೂರ್ವಾನುಮತಿ ವರ್ಗ’ದ ಅಡಿಯಲ್ಲಿ ಇಂತಹ ಅರ್ಜಿಗಳನ್ನು ಪರಿಗಣಿಸಿದ ಅಧಿಕಾರಿಗಳ ಕ್ರಮವನ್ನು ಕೂಡ ಒಪ್ಪಿಕೊಂಡಿದೆ.
ವಿದೇಶ ರಾಷ್ಟ್ರಗಳಲ್ಲಿ ಆಶ್ರಯಕ್ಕಾಗಿ ನಾವು ಮನವಿ ಸಲ್ಲಿಸಿದ್ದೇವೆ. ಆದರೆ, ದೇಶದ ವಿವಿಧ ಪಾಸ್ಪೋರ್ಟ್ ಕಚೇರಿಗಳಿಂದ ಕಳೆದ ಐದು ವರ್ಷಗಳಿಂದ ಪಾಸ್ಪೋರ್ಟ್ ನೀಡಲು ನಿರಾಕರಿಸಲಾಗುತ್ತಿದೆ. ನಾವು ಭಾರತದ ಸಮಗ್ರತೆ, ಸಾರ್ವಭೌಮತೆ ಬಗ್ಗೆ ಪೂರ್ವಾಗ್ರಹದ ಚಟುವಟಿಕೆಗಳಲ್ಲಿ ತೊಡಗಿರುವ ಸಾಧ್ಯತೆ ಇದೆ ಎಂಬ ಕಾರಣ ಪಾಸ್ಪೋರ್ಟ್ ನಿರಾಕರಿಸಲಾಗುತ್ತಿದೆ ಎಂದು ಮೂವರು ಮನವಿಯಲ್ಲಿ ತಿಳಿಸಿದ್ದರು.