ಎಚ್ಚರಿಕೆ...ಬ್ರೇಕ್ಫಾಸ್ಟ್ ತಪ್ಪಿಸಿದರೆ ಈ ಗಂಭೀರ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು...
ಇಂದಿನ ಧಾವಂತದ ಯುಗದಲ್ಲಿ ಬ್ರೇಕ್ಫಾಸ್ಟ್ ಅಥವಾ ಬೆಳಗಿನ ತಿಂಡಿಯನ್ನು ತಿನ್ನಲೂ ಹೆಚ್ಚಿನವರಿಗೆ ಪುರಸೊತ್ತು ಇರುವುದಿಲ್ಲ. ಹೆಚ್ಚಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಇದಕ್ಕೆ ಹೊರತಲ್ಲ. ಬ್ರೇಕ್ಫಾಸ್ಟ್ ತಪ್ಪಿಸುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಮುಕ್ತ ಆಹ್ವಾನ ನೀಡಿದಂತಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.
ಹೇಗೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿವೆ ಮಾಹಿತಿಗಳು....
ಹೃದಯದ ಮೇಲೆ ಪರಿಣಾಮ ಬೀರುತ್ತದೆ
ಬೆಳಿಗ್ಗೆ ಆರೋಗ್ಯಕರ ಆಹಾರ ಸೇವನೆಯಿಂದ ದಿನವನ್ನು ಆರಂಭಿಸುವವರಿಗೆ ಹೋಲಿಸಿದರೆ ಬ್ರೇಕ್ಫಾಸ್ಟ್ ತಪ್ಪಿಸಿಕೊಳ್ಳುವವರು ಹೃದಯ ಕಾಯಿಲೆಗಳಿಗೆ ಗುರಿಯಾಗುವ ಅಪಾಯ ಹೆಚ್ಚು ಎನ್ನುವುದನ್ನು ಅಧ್ಯಯನವೊಂದು ಸಾಬೀತುಗೊಳಿಸಿದೆ. ಬ್ರೇಕ್ಫಾಸ್ಟ್ ತಪ್ಪಿಸುವುದರಿಂದ ರಕ್ತದೊತ್ತಡ ಮತ್ತು ಮಾನಸಿಕ ಒತ್ತಡ ಹೆಚ್ಚುತ್ತವೆ. ಈ ಅಭ್ಯಾಸ ಮುಂದುವರಿದರೆ ಕಾಲಕ್ರಮೇಣ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟತೊಡಗುತ್ತದೆ ಮತ್ತು ಅದು ಹೃದಯಾಘಾತವನ್ನುಂಟು ಮಾಡುತ್ತದೆ.
ಟೈಪ್-2 ಮಧುಮೇಹದ ಹೆಚ್ಚಿನ ಅಪಾಯ
ಬ್ರೇಕ್ಫಾಸ್ಟ್ ತಪ್ಪಿಸುವವರಿಗೆ ಹೋಲಿಸಿದರೆ ಬೆಳಿಗ್ಗೆ ಆರೋಗ್ಯಕರ ತಿಂಡಿ ತಿನ್ನುವವವರು ಟೈಪ್-2 ಮಧುಮೇಹಕ್ಕೆ ತುತ್ತಾಗುವ ಅಪಾಯವು ಕಡಿಮೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಮಹಿಳೆಯರು ತಮ್ಮ ಕೆಲಸದ ಭರಾಟೆಯಲ್ಲಿ ಹೆಚ್ಚಿನ ಸಲ ಬೆಳಗಿನ ತಿಂಡಿಯನ್ನು ಕಡೆಗಣಿಸುವುದರಿಂದ ಟೈಪ್-2 ಮಧುಮೇಹಕ್ಕೆ ತುತ್ತಾಗುವುದು ಹೆಚ್ಚು. ರಾತ್ರಿ ಮಲಗಿದ ಬಳಿಕ ಬೆಳಿಗ್ಗೆ ಏಳುವವರೆಗೆ ಉಪವಾಸವಿರುವುದರಿಂದ ಬ್ರೇಕ್ಫಾಸ್ಟ್ ತಪ್ಪಿಸುವುದು ಈ ಉಪವಾಸದ ಅವಧಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಇದು ರಕ್ತದಲ್ಲಿ ಸಕ್ಕರೆಯ ಮಟ್ಟ ಮತ್ತು ಇನ್ಸುಲಿನ್ ಉತ್ಪಾದನೆಯಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು.
ಬೊಜ್ಜು ಹೆಚ್ಚುತ್ತದೆ
ಇದನ್ನು ಓದಿದರೆ ಅಚ್ಚರಿಯೆನ್ನಿಸಬಹುದು. ನೀವು ದೇಹತೂಕ ಇಳಿಸಲು ಬಯಸಿದ್ದೀರಾದರೆ ಕಡಿಮೆ ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ ಎಂದು ಭಾವಿಸಿರಬಹುದು. ಆದರೆ ಇದು ಬ್ರೇಕ್ಫಾಸ್ಟ್ ತಪ್ಪಿಸಿಕೊಳ್ಳುವುದಕ್ಕೆ ಅನ್ವಯಿಸುವುದಿಲ್ಲ. ಬ್ರೇಕ್ಫಾಸ್ಟ್ ತಪ್ಪಿಸುವುದರಿಂದ ಬಳಿಕ ಹೆಚ್ಚು ಕೊಬ್ಬಿರುವ ಆಹಾರವನ್ನು ಸೇವಿಸುವ ತುಡಿತ ಉಂಟಾಗುತ್ತದೆ. ಅಲ್ಲದೆ ಊಟದ ವೇಳೆ ಹಸಿವು ತೀವ್ರವಾಗಿರುತ್ತದೆ. ಪರಿಣಾಮವಾಗಿ ಹೆಚ್ಚಿನ ಊಟ ಮಾಡುವಂತಾಗುತ್ತದೆ ಮತ್ತು ದಿನದ ಅತ್ಯಂತ ಹೆಚ್ಚು ಜಡತೆಯ ಸಮಯದಲ್ಲಿ ಹೆಚ್ಚಿನ ಕ್ಯಾಲರಿಗಳು ಶರೀರದಲ್ಲಿ ಸೇರಿಕೊಂಡು ಅಂತಿಮವಾಗಿ ತೂಕ ಹೆಚ್ಚುತ್ತದೆ.
ಮೈಗ್ರೇನ್ಗೆ ಕಾರಣವಾಗುತ್ತದೆ
ನೀವು ನಿಯಮಿತವಾಗಿ ತಲೆನೋವು ಮತ್ತು ಮೈಗ್ರೇನ್ ಅಥವಾ ಅರೆ ತಲೆನೋವಿ ನಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಬ್ರೇಕ್ಫಾಸ್ಟ್ ತಪ್ಪಿಸಲೇಬೇಡಿ. ಊಟವನ್ನು, ವಿಶೇಷವಾಗಿ ಬ್ರೇಕ್ಫಾಸ್ಟ್ ತಪ್ಪಿಸುವುದರಿಂದ ರಕ್ತದಲ್ಲಿಯ ಸಕ್ಕರೆಯ ಮಟ್ಟವು ಕುಸಿಯುತ್ತದೆ ಮತ್ತು ಇದನ್ನು ಸರಿಪಡಿಸಲು ಶರೀರದಲ್ಲಿ ಹಾರ್ಮೋನ್ಗಳು ಬಿಡುಗಡೆ ಗೊಳ್ಳುತ್ತವೆ. ಇದು ರಕ್ತದೊತ್ತಡವನ್ನು ಹೆಚ್ಚಿಸಿ ತೀವ್ರ ತಲೆನೋವಿಗೆ ಕಾರಣವಾಗುತ್ತದೆ.
ತಲೆಗೂದಲು ನಷ್ಟವಾಗಬಹುದು
ಸುಂದರ ತಲೆಗೂದಲನ್ನು ಹೊಂದಿರಲು ಪೌಷ್ಟಿಕ ಬ್ರೇಕ್ಫಾಸ್ಟ್ ಅಗತ್ಯವಾಗಿದೆ. ಪ್ರೋಟಿನ್ಭರಿತ ಬ್ರೇಕ್ಫಾಸ್ಟ್ ಕೆರಾಟಿನ್ ಉತ್ಪತ್ತಿಗೆ ನೆರವಾಗುತ್ತದೆ ಮತ್ತು ಕೆರಾಟಿನ್ ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಜೈವಿಕ ಯಂತ್ರ ನಿಧಾನಗೊಳ್ಳುತ್ತದೆ
ಬೆಳ್ಳಂಬೆಳಿಗ್ಗೆ ಕಾರಿನಲ್ಲಿ ಇಂಧನ ಇಲ್ಲದೆ ಅದನ್ನು ಓಡಿಸಲು ಸಾಧ್ಯವಿಲ್ಲ ಅಲ್ಲವೇ? ಇದು ನಮ್ಮ ಶರೀರಕ್ಕೂ ಅನ್ವಯಿಸುತ್ತದೆ. ಬ್ರೇಕ್ಫಾಸ್ಟ್ 12 ಗಂಟೆಗಳ ಸುದೀರ್ಘ ಉಪವಾಸದ ಬಳಿಕ ನಾವು ಸೇವಿಸುವ ಮೊದಲ ಆಹಾರವಾಗಿದೆ ಮತ್ತು ಇದನ್ನು ತಪ್ಪಿಸಿದರೆ ನಮ್ಮ ಶರೀರಕ್ಕೆ ಉತ್ತಮ ಆರಂಭ ದೊರೆಯುವುದಿಲ್ಲ. ನಮ್ಮ ಜೈವಿಕ ಯಂತ್ರ ನಿಧಾನಗೊಳ್ಳುತ್ತದೆ ಮತ್ತು ಇದರಿಂದ ಇಡೀ ದಿನ ಆಲಸ್ಯ ಕಾಡುತ್ತದೆ.
ಗ್ಯಾಸ್ಟ್ರಿಕ್ ತೊಂದರೆಗಳು
ಬ್ರೇಕ್ಫಾಸ್ಟ್ ತಪ್ಪಿಸುವುದರಿಂದ ಊಟದ ವೇಳೆ ಹೆಚ್ಚಿನ ಆಹಾರ ಹೊಟ್ಟೆಯನ್ನು ಸೇರುತ್ತದೆ. ಪರಿಣಾಮವಾಗಿ ಆಹಾರವನ್ನು ಜೀರ್ಣಿಸುವ ಕರುಳುಗಳ ಮೇಲೆ ಅಧಿಕ ಹೊರೆ ಬೀಳುತ್ತದೆ ಮತ್ತು ಇದು ಅಲ್ಸರ್,ಗ್ಯಾಸ್ಟ್ರಿಕ್ಸ್, ಅಜೀರ್ಣ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಋತುಸ್ರಾವದಲ್ಲಿ ಏರುಪೇರು
ಇದು ಕಾಲೇಜು ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರು ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ. ತೀವ್ರ ಹೊಟ್ಟೆನೋವು ಮತ್ತು ಕ್ರಮ ತಪ್ಪಿದ ರಕ್ತಸ್ರಾವ ಇದರಲ್ಲಿ ಸೇರಿವೆ. ರಾತ್ರಿಯ ಊಟ ಮತ್ತು ಬ್ರೇಕ್ಫಾಸ್ಟ್ ನಡುವೆ ಸುದೀರ್ಘ ಅಂತರವಿರುತ್ತದೆ ಮತ್ತು ಬ್ರೇಕ್ಫಾಸ್ಟ್ನ್ನು ತಪ್ಪಿಸಿಕೊಂಡರೆ ದಿನದ ಆರಂಭದಲ್ಲಿ ಕೆಲಸವನ್ನಾರಂಭಿಸಲು ಶರೀರಕ್ಕೆ ಪೌಷ್ಟಿಕಾಂಶಗಳ ಕೊರತೆಯಾಗುತ್ತದೆ. ಇದು ಅಂತಿಮವಾಗಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ಅನಿಯಮಿತ ಋತುಸ್ರಾವ ಇದರಲ್ಲಿ ಒಂದಾಗಿದೆ.