ನ್ಯಾ.ಲೋಯಾ ಸಾವು ಪ್ರಕರಣ: ಪುತ್ರ ಅನುಜ್ ಈಗ ಹೇಳುವುದೇನು?, ಈ ಹಿಂದೆ ಹೇಳಿದ್ದೇನು?
ಎರಡು ತದ್ವಿರುದ್ಧ ಹೇಳಿಕೆಗಳು

ಹೊಸದಿಲ್ಲಿ, ಜ.15: ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ನ್ಯಾಯಾಧೀಶರಾಗಿದ್ದ ನ್ಯಾ. ಬಿ.ಎಚ್. ಲೋಯಾ ಸಾವು ಪ್ರಕರಣದ ಬಗ್ಗೆ ಅನುಮಾನಗಳು ಮೂಡಿರುವಂತೆಯೇ ಲೋಯಾರ ಪುತ್ರ “ನನ್ನ ತಂದೆಯ ಸಾವಿನ ಬಗ್ಗೆ ಯಾವುದೇ ಸಂಶಯಗಳಿಲ್ಲ. ಈ ಪ್ರಕರಣವನ್ನು ರಾಜಕೀಯ ಮಾಡಬೇಡಿ. ನಮಗೆ ಕಿರುಕುಳ ನೀಡಬೇಡಿ” ಎಂದಿದ್ದಾರೆ.
ಆದರೆ ಲೋಯಾ ಸಾವು ಪ್ರಕರಣಕ್ಕೆ ಸಂಬಂಧಿಸಿ ಅನುಜ್ ಈ ಹಿಂದೆ ಅನುಮಾನ ವ್ಯಕ್ತಪಡಿಸಿದ್ದರಲ್ಲದೆ ಈ ಬಗ್ಗೆ ತನಿಖೆಗೆ ವಿಶೇಷ ಸಮಿತಿಯನ್ನು ರಚಿಸುವಂತೆಯೂ ಒತ್ತಾಯಿಸಿದ್ದರು. ನ್ಯಾ.ಲೋಯಾ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಈ ಹಿಂದೆ ವರದಿ ಪ್ರಕಟಿಸಿದ್ದ caravanmagazine.in ಇದೀಗ ಅನುಜ್ ಈ ಹಿಂದೆ ಬರೆದಿದ್ದ ಪತ್ರ ಹಾಗು ಈಗಿನ ಹೇಳಿಕೆಯ ಬಗ್ಗೆ ವರದಿ ಮಾಡಿದೆ. ಈ ನಡುವೆ ನ್ಯಾ. ಲೋಯಾ ಸಾವು ಪ್ರಕರಣದ ಬಗ್ಗೆ ಅನುಜ್ ಗೆ ಒತ್ತಡವಿದ್ದಿರಬಹುದು. ಅದಕ್ಕಾಗಿ ಆತ ತಂದೆಯ ಸಾವಿನಲ್ಲಿ ಅನುಮಾನವಿಲ್ಲ ಎಂದು ಹೇಳಿದ್ದಾನೆ. ಲೋಯಾ ಸಾವಿನ ಬಗ್ಗೆ ತನಿಖೆ ನಡೆಯಲೇಬೇಕು” ಎಂದಿದ್ದಾರೆ.
ಅನುಜ್ ಲೋಯಾ 2015 ಫೆ.18ರಂದು caravanmagazine.inಗೆ ಬರೆದ ಪತ್ರದ ಸಾರಾಂಶ ಈ ಕೆಳಗಿದೆ:
“ತಂದೆಯ ಸಾವಿನ ಎರಡೂವರೆ ತಿಂಗಳುಗಳ ನಂತರ ಮಹಾರಾಷ್ಟ್ರದ ಮುಖ್ಯ ನ್ಯಾಯಾಧೀಶ ಮೋಹಿತ್ ಶಾ ಇಂದು ನಮ್ಮನ್ನು ಭೇಟಿಯಾದರು. ನಾನು ಅವರ ಮುಖದಲ್ಲಿ ಅಪರಾಧಿ ಪ್ರಜ್ಞೆಯನ್ನು ನಾನು ಗಮನಿಸಿದೆ. ಈ ರಾಜಕಾರಣಿಗಳು ನನ್ನ ಕುಟುಂಬದ ಸದಸ್ಯರಿಗೆ ತೊಂದರೆಯುಂಟು ಮಾಡುತ್ತಾರೆ ಎಂಬ ಆತಂಕ ನನಗಿದೆ. ಅವರ ಜೊತೆಗೆ ಹೋರಾಟ ನಡೆಸುವಷ್ಟು ನಾನು ಶಕ್ತಿಶಾಲಿಯಲ್ಲ.
ತಂದೆಯ ಸಾವಿನ ಬಗ್ಗೆ ನಾನವರಿಗೆ (ಮೋಹಿತ್ ಶಾ) ಎಲ್ಲವನ್ನೂ ಹೇಳಿದ್ದೇನೆ ಹಾಗು ತನಿಖಾ ಸಮಿತಿಯೊಂದನ್ನು ರಚಿಸುವಂತೆ ಹೇಳಿದ್ದೇನೆ. ಅವರ ವಿರುದ್ಧ ನಾವೇನಾದರೂ ಮಾಡುವುದನ್ನು ತಡೆಯಲು ಅವರು ನನ್ನ ಕುಟುಂಬಸ್ಥರಿಗೆ ತೊಂದರೆಯನ್ನುಂಟು ಮಾಡಬಹುದು ಎಂಬ ಭಯ ನನಗಿದೆ. ನಮ್ಮ ಜೀವಕ್ಕೆ ಅಪಾಯವಿದೆ. ನನ್ನ ಅಜ್ಜ, ಅಜ್ಜಿ, ಸಹೋದರಿ, ತಾಯಿ, ನಾನು ಸೇರಿದಂತೆ ನನ್ನ ಕುಟುಂಬದ ಯಾರಿಗಾದರೂ ಸ್ವಾಭಾವಿಕವಾಗಿ ಅಥವಾ ಇನ್ಯಾವುದೇ ರೀತಿ ಏನಾದರೂ ಸಂಭವಿಸಿದರೆ ಮುಖ್ಯ ನ್ಯಾಯಮೂರ್ತಿ ಮೋಹಿತ್ ಶರ್ಮಾ ಅವರೇ ಹೊಣೆಗಾರರಾಗಿರುತ್ತಾರೆ.
ಅವರಿಗೆ ಮಾತ್ರ ಗೊತ್ತಿರುವ ಕೆಲ ವಿಷಯಗಳ ಬಗ್ಗೆ ನಾನವರಲ್ಲಿ ಕೇಳಿದೆ. ಆದರೆ ಅವರು ಈ ಎಲ್ಲಾ ವಿಷಯಗಳು ತಪ್ಪು ಎಂದು ಹೇಳಿದರು. (ಈ ವಿಷಯಗಳನ್ನು ಅವರು ಒಪ್ಪಿಲ್ಲ) ನನಗೆ ಅಥವಾ ನನ್ನ ಕುಟುಂಬ ಸದಸ್ಯರಿಗೆ ಏನಾದರೂ ಸಂಭವಿಸಿದರೆ ಮುಖ್ಯ ನ್ಯಾಯಮೂರ್ತಿ ಮೋಹಿತ್ ಶಾ ಹಾಗು ಈ ಪಿತೂರಿಯ ಹಿಂದಿರುವವರು ಎಲ್ಲರೂ ಜವಾಬ್ದಾರರು".
ಸಹಿ
ಅನುಜ್ ಲೋಯಾ
2017ರ ನವೆಂಬರ್ 27ರಂದು ಅನುಜ್ ಲೋಯಾ ಎಂಬ ಹೆಸರಿನ ಇಮೇಲ್ ನಿಂದ ಕಾರವಾನ್ ಮ್ಯಾಗಝಿನ್ ಮೇಲ್ ಗೆ ಸಂದೇಶವೊಂದು ಬಂದಿದ್ದು, ಅದರ ಸಾರಾಂಶ ಹೀಗಿದೆ.
ರಿಂದ,
ಅನುಜ್ ಬ್ರಿಜ್ ಗೋಪಾಲ್ ಲೋಯಾ, ಪುಣೆ
ದಿನಾಂಕ: 27-11-2017
ರಿಗೆ,
ಸಂಪಾದಕರು, ಕಾರವಾನ್, ಹೊಸದಿಲ್ಲಿ
"ನಾನು, ಬಿ.ಎಚ್. ಲೋಯಾ ಅವರ ಪುತ್ರನಾಗಿದ್ದು, ನನ್ನ ತಂದೆಯ ಸಾವಿನ ಬಗ್ಗೆ ಸೇರಿದಂತೆ ನೀವು ಪ್ರಕಟಿಸಿದ 2 ವರದಿಗಳಿಂದ ವಿವಾದ ಸೃಷ್ಟಿಯಾದುದನ್ನು ನಾನು ಗಮನಿಸಿದ್ದೇನೆ.
ನನ್ನ ತಂದೆಯ ಸಾವಿನ ಸಂದರ್ಭ ಹಾಗು ಭಾವನಾತ್ಮಕವಾಗಿ ಒತ್ತಡದಲ್ಲಿದ್ದ ವೇಳೆ ನನ್ನಲ್ಲಿ ಕೆಲವರು ನನ್ನ ತಂದೆಯ ಸಾವಿನ ಬಗ್ಗೆ ಗೊಂದಲಗಳನ್ನು ಸೃಷ್ಟಿಸಿದರು. ಸತ್ಯಾಂಶಗಳು ನನಗೆ ಅರಿವಾದಂತೆ ಹೃದಯಾಘಾತದಿಂದ ಅವರು ಮೃತಪಟ್ಟಿರುವುದು ನನಗೆ ತಿಳಿಯಿತು. ಸಹೋದ್ಯೋಗಿಗಳು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿದರೂ ಅವರು ಬದುಕುಳಿಯಲಿಲ್ಲ.
ತಂದೆ ಹೃದಯಾಘಾತವಲ್ಲದೆ ಬೇರೆ ಕಾರಣಗಳಿಂದ ಮೃತಪಟ್ಟಿದ್ದಾರೆ ಎನ್ನುವುದರಲ್ಲಿ ನನಗೆ, ನನ್ನ ಸಹೋದರಿ ಹಾಗು ತಾಯಿಗೆ ಯಾವುದೇ ಸಂಶಯಗಳಿಲ್ಲ. ಸಹೋದ್ಯೋಗಿಯ ಕಾರಿನಲ್ಲಿ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎನ್ನುವುದು ನನಗೆ ತಿಳಿದಿದೆ. ನನ್ನ ತಂದೆಯ ಗೆಳೆಯರು, ಸಹೋದ್ಯೋಗಿಗಳು ಹಾಗು ಬಾಂಬೆ ಹೈಕೋರ್ಟ್ ನ ನ್ಯಾಯಾಧೀಶರು ನನ್ನ ಕುಟುಂಬಕ್ಕೆ ತೋರಿಸಿದ ಸಹಾನುಭೂತಿಯಲ್ಲಿ ನಾನು ಪ್ರಾಮಾಣಿಕತೆಯನ್ನು ಕಂಡಿದ್ದೇನೆ. 2014ರ ಡಿಸೆಂಬರ್ 1ರಂದು ನನ್ನ ತಂದೆ ಅನಾರೋಗ್ಯದಿಂದಿದ್ದಾಗ ಹಲವು ನ್ಯಾಯಾಧೀಶರು ಅವರ ಜೊತೆಗಿದ್ದರು ಎನ್ನುವುದು ನನಗೆ ನಂತರ ತಿಳಿಯಿತು. ತಂದೆ ಅನಾರೋಗ್ಯಕ್ಕೊಳಗಾದ ಬಗ್ಗೆ, ಆಸ್ಪತ್ರೆಗೆ ಕರೆದುಕೊಂಡು ಹೋದ ಬಗ್ಗೆ, ತಂದೆ ಮೃತಪಟ್ಟ ಹಾಗು ಮರಣೋತ್ತರ ಪರೀಕ್ಷೆ ನಡೆದ ಬಗ್ಗೆ ಅವರ ಸಹೋದ್ಯೋಗಿಗಳು ನನ್ನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡುತ್ತಿದ್ದರು. ಗೇಟ್ ಗಾಂವ್ ಗೆ ತಂದೆಯ ಮೃತದೇಹ ತಲುಪಿದ್ದ ಸಂದರ್ಭ ಇಬ್ಬರು ಮ್ಯಾಜಿಸ್ಟ್ರೇಟ್ ಗಳು ಜೊತೆಗೆ ಆಗಮಿಸಿದ್ದದ್ದು ನನಗೆ ನೆನಪಿದೆ. ಯಾವುದೇ ಸತ್ಯಾಂಶವಿಲ್ಲದ ಹಾಗು ನಮ್ಮನ್ನು ನೋಯಿಸಿದ ನಿಮ್ಮ ವರದಿಯನ್ನು ನೋಡಿ ನನಗೆ ನೋವಾಗಿದೆ.
ಈಶ್ವರ್ ಬಹೇಠಿ ನಮ್ಮ ಕುಟುಂಬದ ಸದಸ್ಯರಂತಿದ್ದು, ಕಾಲೇಜಿನ ದಿನಗಳಿಂದಲೇ ನನ್ನ ತಂದೆಯ ಆಪ್ತ ಸ್ನೇಹಿತರಾಗಿದ್ದರು. ನಿಮ್ಮ ವರದಿಗಳು ಅನಾವಶ್ಯಕವಾಗಿ ಅವರ ಮೇಲೆ ಸಂದೇಹಪಡುವಂತಿದೆ. ನನಗೆ ಹಾಗು ಕುಟುಂಬಕ್ಕೆ ಅವರ ಮೇಲಾಗಲೀ, ಅವರ ಉದ್ದೇಶದ ಬಗ್ಗೆಯಾಗಲೀ ಯಾವುದೇ ಸಂಶಯವಿಲ್ಲ. ನನ್ನ ತಂದೆಯ ಮೊದಲ ಪುಣ್ಯತಿಥಿಯ ಸಂದರ್ಭ ನನ್ನ ಅಂಕಲ್ ಈಶ್ವರ್ ಬಹೇಠಿ ತಂದೆಯ ನೆನಪಿನಲ್ಲಿ ದೊಡ್ಡ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು.
2014ರ ಡಿಸೆಂಬರ್ 1ರಂದು ನನ್ನ ತಂದೆಯ ಜೊತೆಗಿದ್ದ ನ್ಯಾಯಾಧೀಶರ ಬಗ್ಗೆ ನನಗಾಗಲೀ ನನ್ನ ಕುಟುಂಬಕ್ಕಾಗಲೀ ಯಾವುದೇ ಸಂದೇಹವಿಲ್ಲ. ತಂದೆ ಅನಾರೋಗ್ಯದಿಂದಿದ್ದಾಗ ಅವರಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡಿದ ನ್ಯಾಯಾಧೀಶರಿಗೆ ನಾವು ಕೃತಜ್ಞರಾಗಿದ್ದೇವೆ.
ಈ ಪ್ರಕರಣದಲ್ಲಿ ಸತ್ಯಾಂಶಗಳನ್ನು ಗಮನಿಸುವಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ".
ಧನ್ಯವಾದಗಳು,
ಅನುಜ್ ಲೋಯಾ
2015 ಫೆ.18ರ ಪತ್ರ 2017 ನ.27ರ ಪತ್ರ