ಕಳಸಾ-ಬಂಡೂರಿ ಹೋರಾಟಗಾರರಿಂದ ನೂತನ ‘ಜನಸಾಮಾನ್ಯರ ಪಕ್ಷ’ ರಚನೆ

ಬೆಂಗಳೂರು, ಜ.15: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಹೊಸ ಅಲೆ ಸೃಷ್ಟಿಸುವ ನಿಟ್ಟಿನಲ್ಲಿ ಕಳಸಾ ಬಂಡೂರಿ ಮಹದಾಯಿ ಹೋರಾಟಗಾರರು ‘ಜನಸಾಮಾನ್ಯರ ಪಕ್ಷ’ಎಂಬ ಹೊಸ ಪಕ್ಷವೊಂದನ್ನು ಹುಟ್ಟು ಹಾಕಿದ್ದಾರೆ.
ಸೋಮವಾರ ಬಾಗಲಕೋಟೆ ಜಿಲ್ಲೆಯ ಕ್ರಾಂತಿಕಾರಿ ಬಸವಣ್ಣ ಐಕ್ಯ ಸ್ಥಳವಾದ ಕೂಡಲಸಂಗಮದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ರೈತ ಮಹಿಳೆ ನಿಂಬೆವ್ವ ಎಂಬವರು ಪಕ್ಷದ ಬಾವುಟ ಹಾಗೂ ಟ್ರಾಕ್ಟರ್ ಚಿಹ್ನೆಯನ್ನು ಲೋಕಾರ್ಪಣೆ ಮಾಡುವ ಮೂಲಕ ಪಕ್ಷಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಪಕ್ಷದ ನೂತನ ಅಧ್ಯಕ್ಷ ಡಾ.ಅಯ್ಯಪ್ಪ, ಚುನಾವಣೆ ಸಂದರ್ಭದಲ್ಲಿ ಮಾತ್ರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ರಾಜಕೀಯ ಪಕ್ಷಗಳ ಬಗ್ಗೆ ಬೇಸರವಾಗಿದೆ. ಕೇವಲ ರಾಜಕೀಯ ಹಿತಾಸಕ್ತಿಯಿದ್ದಲ್ಲಿ ಕಳಸಾ ಬಂಡೂರಿ ಯೋಜನೆ ಇಂದಿಗೆ ಪೂರ್ಣವಾಗುತ್ತಿತ್ತು. ಆದರೆ, ರಾಜಕೀಯ ಪಕ್ಷಗಳು ಜನರನ್ನು ಕಡೆಗಣಿಸಿವೆ. ಹೀಗಾಗಿ, ಇದಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಎಚ್ಚರಿಸಿದರು.
ರಾಜ್ಯದ ಗಡಿ ಪ್ರದೇಶದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಯಾವುದೇ ಅನುಮತಿ ಅಗತ್ಯವಿಲ್ಲ. ಆದರೂ ರಾಜ್ಯ ಸರಕಾರ ಅನುಮತಿ ನೀಡಿದರೆ ರೈತರ ಸಹಾಯದಿಂದ ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ನಮ್ಮ ಪಕ್ಷ ಸಿದ್ದವಿದೆ ಎಂದರು.
ಈಗಾಗಲೇ ನಾವು ರೈತ ಮುಖಂಡರ ಜೊತೆ ಸಮಾಲೋಚನೆ ಸಭೆ ನಡೆಸಿದ್ದು, ರೈತರುಗಳಿಂದ ಹಣ ಸಂಗ್ರಹ ಮಾಡಿ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ. ಜನ ಸಾಮಾನ್ಯರ ಪಕ್ಷದಿಂದ 20ಕೋಟಿ ರೂ.ಗಳನ್ನು ದೇಣಿಗೆ ನೀಡಲು ಸಿದ್ದರಿದ್ದೇವೆ ಎಂದು ಘೋಷಿಸಿದರು.
ಪಕ್ಷದ ಸಂಸ್ಥಾಪಕ ಅಧ್ಯಕ್ಷ ಟಿ.ವಿ.ಸತೀಶ್ ಮಾತನಾಡಿ, ಲಿಂಗಾಯತ ಧರ್ಮ ಮಾನವ ಧರ್ಮವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಲಿಂಗಾಯತ ಸಮುದಾಯವನ್ನು ಮುಗಿಸಲು ಬರುತ್ತಿದ್ದಾರೆ. ಉತ್ತರ ಕರ್ನಾಟಕವನ್ನು ಮುಗಿಸಲು ಜನತಾದಳದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಪಕ್ಷದ ಉದ್ದೇಶ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿ, ರಾಜಕೀಯ ಮತ್ತು ಆಡಳಿತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ. ಕಳಸಾ-ಬಂಡೂರಿಯಿಂದ ಮಲಪ್ರಭೆಗೆ ನೀರು ಹರಿಸುವ ಯೋಜನೆಗೆ ಶೀಘ್ರವೇ ಶಾಶ್ವತ ಪರಿಹಾರ ಕಲ್ಪಿಸುವುದು ಹಾಗೂ ಕೃಷ್ಣಾ ಕಣಿವೆ ಯೋಜನೆಗಳ ತ್ವರಿತ ಜಾರಿ, ರೈತರ ಜಮೀನುಗಳಿಗೆ ನೀರು ಹರಿಸುವ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಪಕ್ಷ ಪ್ರಕಟಿಸಿದೆ.
ಪಕ್ಷ ಉದ್ಘಾಟನೆ ಸಮಾರಂಭದಲ್ಲಿ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್, ಮಹದಾಯಿ ಹೋರಾಟಗಾರರು ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು. ಸಮಾರಂಭದಲ್ಲಿ ಉತ್ತರ ಕರ್ನಾಟಕ ಭಾಗದ ಸಾವಿರಾರು ಜನ ಪಾಲ್ಗೊಂಡಿದ್ದರು.







