'ಬಂಟ್ವಾಳದ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ' ಕಾರ್ಯಕ್ರಮ
.jpg)
ಬಂಟ್ವಾಳ,ಜ. 15: ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ದೇಶದ 18 ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮೂರುವರೆ ವರ್ಷದಲ್ಲಿ ದೇಶದ 19 ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದು, ಮುಂದಿನ ಚುನಾವಣೆಯಲ್ಲಿ ಕರ್ನಾಟಕ 20ನೆ ರಾಜ್ಯವಾಗಲಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಭವಿಷ್ಯ ನುಡಿದಿದ್ದಾರೆ.
ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಇವರ ಮುಂದಾಳತ್ವದಲ್ಲಿ ಜ.14ರಂದು ಆರಂಭವಾದ 13 ದಿನಗಳ "ಬಂಟ್ವಾಳದ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ"ಯು ಕರ್ಪೆಯಲ್ಲಿ ಮೊದಲ ದಿನ ಸಂಪನ್ನಗೊಂಡ ಬಳಿಕ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಜಗತ್ತಿನಲ್ಲಿಯೇ ಮೂರನೆ ಸ್ಥಾನದಲ್ಲಿ ಗುರುತಿಸಿರುವ ಪ್ರಧಾನಿ ನರೇಂದ್ರ ಮೋದಿ ಅದ್ಭುತವಾದ ಆಡಳಿತವನ್ನು ನೀಡಿ ದೇಶಕ್ಕೆ ಮಾದರಿಯಾಗಿದ್ದು, ಭವಿಷ್ಯದಲ್ಲೂ ಭವ್ಯ ಭಾರತದ ಕನಸನ್ನು ಹೊತ್ತಿರುವ ಅವರ ಕೈಯನ್ನು ಬಲಪಡಿಸಬೇಕು ಎಂದರು.
ಬಿಜೆಪಿ ಯಾವತ್ತೂ ಮುಸ್ಲಿಂ, ಕ್ರಿಶ್ಚಿಯನ್ ವಿರೋಧಿ ಅಲ್ಲ, ಕಾಂಗ್ರೆಸ್ ಓಟಿಗಾಗಿ ಮತೀಯ ಗಲಭೆ ಸೃಷ್ಠಿಸುತ್ತಿದೆ. ಟಿಪ್ಪು ಜಯಂತಿಯನ್ನು ಅತೀ ಉತ್ಸಾಹದಿಂದ ಆಚರಿಸಿದ್ದ ಕಾಂಗ್ರೆಸ್ ಸರಕಾರ ವಿವೇಕಾನಂದರ ಜಯಂತಿಯನ್ನೇ ಮರೆತಿದೆ ಎಂದು ಟೀಕಿಸಿದ ಅವರು, ಮತದಾರ ದೇಶದ ಯಜಮಾನನಾಗಿದ್ದು, ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನು ರಾಯಭಾರಿಯಾಗಿದ್ದಾನೆ. ಯಾವುದೇ ಆಮಿಷಗಳಿಗೆ ಬಲಿಯಾಗದೇ ಕಾರ್ಯಕರ್ತರು ಈಗಿಂದೀಗಲೇ ಪಕ್ಷದ ಗೆಲುವಿಗೆ ಶ್ರಮಿಸಬೇಕು. ತನ್ಮೂಲಕ ಬಂಟ್ವಾಳ ಕ್ಷೇತ್ರದಲ್ಲಿ ಕಮಲ ಅರಳಬೇಕು ಎಂದರು.
ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ. ಭಟ್ ಮಾತನಾಡಿದರು.
ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪಾಡಿಗುತ್ತು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‍ಗೆ ಸೋಲುವ ಭೀತಿ ಉಂಟಾಗಿದ್ದು, ಹತಾಶ ಮನೋಭಾವದಿಂದ ಇಂತಹ ಕೀಳು ಮಟ್ಟದ ಹೇಳಿಕೆಯನ್ನು ನೀಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಇದರಿಂದ ವಿಚಲಿತರಾಗದೇ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದರು.
ಬಿಜೆಪಿ ಅದ್ಯಕ್ಷ ದೇವದಾಸ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಮಾಜಿ ತಾಪಂ ಸದಸ್ಯರಾದ ರತ್ನಕುಮಾರ್ ಚೌಟ, ವಸಂತ ಅಣ್ಣಳಿಕೆ, ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಸಂತೋಷ ಕುಮಾರ್ ರಾಯಿಬೆಟ್ಟು, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಪ್ರದೀಪ್ ಕುಮಾರ್ ಅಡ್ಯಾರ್, ಜಿಲ್ಲಾ ಯುವ ಮೋರ್ಚ ಕಾರ್ಯದರ್ಶಿ ಸುದರ್ಶನ್ ಬಜ, ಸಂಗಬೆಟ್ಟು ಗ್ರಾಪಂ ಉಪಾಧ್ಯಕ್ಷ ಸತೀಶ್ ಪೂಜಾರಿ, ಸ್ಥಳೀಯ ಮುಖಂಡರಾದ ಉಮೇಶ್ ಗೌಡ, ಕರ್ಪೆ ಯುವ ಮೋರ್ಚ ಅಧ್ಯಕ್ಷ ರಾಜೇಂದ್ರ ಪೂಜಾರಿ ನೆಕ್ಲಾಜೆ, ದೋಗ ಪೂಜಾರಿ, ಚೇತನ್, ತೇಜಸ್ ಅವರು ಉಪಸ್ಥಿತರಿದ್ದರು. ಡೋಂಬಯ್ಯ ಅರಳ ಸ್ವಾಗತಿಸಿ, ನಿರೂಪಿಸಿದರು. ಬಳಿಕ ಕಾರ್ಯಕರ್ತರೊಬ್ಬರ ನಿವಾಸದಲ್ಲಿ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರು ವಾಸ್ತವ್ಯವೂಡಿದರು.
ಸೋಮವಾರ ಬೆಳಿಗ್ಗೆ ಇಲ್ಲಿಂದ ಸಂಗಬೆಟ್ಟು-ಎಲಿಯನಡುಗೋಡು-ಕುಕ್ಕೆಪಾಡಿ ಗ್ರಾಮಗಳ ಮೂಲಕ ರಾಯಿಯತ್ತ ಪಾದಯಾತ್ರೆ ತೆರಳಿತು.
ದಾರಿಯುದ್ದಕ್ಕೂ ಪಾದಯಾತ್ರೆಗೆ ಕಾರ್ಯಕರ್ತರು, ಮಹಿಳೆಯರು ಹಾಗೂ ಗ್ರಾಮಸ್ಥರಿಂದ ಅಭೂತ ಪೂರ್ವ ಬೆಂಬಲ ವ್ಯಕ್ತವಾಯಿತು.







