ವೃದ್ಧರನ್ನು ಎಳೆದೊಯ್ದ ಪೊಲೀಸ್ ಪೇದೆ ಅಮಾನತು
ವೀಡಿಯೋ ವೈರಲ್

ಚಿಕ್ಕಮಗಳೂರು, ಜ.15: ವೃದ್ಧರೋರ್ವರನ್ನು ನೆಲದ ಮೇಲೆ ಎಳೆದೊಯ್ದ ಪೊಲೀಸ್ ಪೇದೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಸೋಮವಾರ ಅಮಾನತುಗೊಳಿಸಿದ್ದಾರೆ.
ಭಾನುವಾರ ಶೃಂಗೇರಿ ತಾಲೂಕು ಕೆಂದ್ರದ ಶ್ರೀ ಶಾರದಾಂಬ ದೇವಾಲಯದ ಮಹಾದ್ವಾರದಲ್ಲಿ ವೃದ್ಧರೋರ್ವರು ನಡೆಯಲಾಗದೆ ನೆಲದ ಮೇಲೆ ತೆವಳುತ್ತಿರುವುದನ್ನು ಕಂಡ ಪೊಲೀಸ್ ಪೇದೆ ಸುರೇಶ್ ಭಟ್, ಅಮಾನವೀಯ ರೀತಿಯಲ್ಲಿ ವೃದ್ಧನ ಕೊರಳ ಪಟ್ಟಿ ಹಿಡಿದು ಸತ್ತ ಪ್ರಾಣಿಯಂತೆ ಎಳೆದೊಯ್ಯುವ ಮೂಲಕ ಕ್ರೂರ ರೀತಿಯಲ್ಲಿ ವರ್ತಿಸಿದ್ದರು.
ಪೇದೆಯ ಈ ಅಮಾನವೀಯ ದರ್ಪವನ್ನು ಸ್ಥಳೀಯರು ಮೊಬೈಲ್ ಮೂಲಕ ಸೆರೆ ಹಿಡಿದಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ವಾಟ್ಸಾಪ್ ಫೇಸ್‍ಬುಕ್‍ನಲ್ಲಿ ಪೇದೆಯನ್ನು ಜನರು ತರಾಟೆಗೆ ತೆಗೆದುಕೊಂಡಿದ್ದರು.
ಶೃಂಗೇರಿ ಮಠದಲ್ಲಿ ಪೊಲೀಸ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿರುವುದು ನನ್ನ ಗಮನಕ್ಕೆ ಬಂದಿದೆ. ನಾವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಂಬಂಧಪಟ್ಟ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಯಾರೆಂದು ಗುರುತಿಸಿ, ತಕ್ಷಣ ಅವರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಇಲಾಖೆ ತನಿಖೆಗೆ ಸೂಚಿಸಲಾಗಿದೆ. ಯಾವುದೇ ಉದ್ವೇಗದ ಸಂದರ್ಭದಲ್ಲಿಯೂ ಪೊಲೀಸ್ ಸಿಬ್ಬಂದಿ ಈ ರೀತಿಯಲ್ಲಿ ವರ್ತನೆ ಮಾಡಬಾರದು. ಈ ಅನಿರೀಕ್ಷಿತ ಘಟನೆ ಬಗ್ಗೆ ನಾನು ಕ್ಷಮೆ ಕೋರುತ್ತೇನೆ ಮತ್ತು ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲಾಗುವುದು.
ಕೆ.ಅಣ್ಣಾಮಲೈ, ಎಸ್ಪಿ, ಚಿಕ್ಕಮಗಳೂರು







