ಕನ್ನಡಿಗರ ಕ್ಷಮೆಯಾಚಿಸಲು ಯಡಿಯೂರಪ್ಪ ಆಗ್ರಹ
ಗೋವಾ ನೀರಾವರಿ ಸಚಿವ ಪಾಳೇಕರ್ ಹೇಳಿಕೆಗೆ ಖಂಡನೆ

ಹುಬ್ಬಳ್ಳಿ, ಜ. 14: ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದ ಗೋವಾ ನೀರಾವರಿ ಸಚಿವ ವಿನೋದ್ ಪಾಳೇಕರ್ ಕೂಡಲೇ ಕನ್ನಡಿಗರ ಕ್ಷಮೆ ಕೋರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಉಭಯ ರಾಜ್ಯಗಳ ನಡುವೆ ಸೌಹಾರ್ದತೆ ವಾತಾವರಣ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಅನಗತ್ಯವಾಗಿ ಪರಿಸ್ಥಿತಿಯನ್ನು ಹಾಳು ಮಾಡುವ ಇಂತಹ ಬೇಜವಾಬ್ದಾರಿ ಹೇಳಿಕೆಗಳಿಂದ ಯಾರಿಗೂ ಲಾಭವಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಗೋವಾ ಫಾರ್ವರ್ಡ್ ಪಾರ್ಟಿ ನಾಯಕ ಹಾಗೂ ಗೋವಾ ನೀರಾವರಿ ಸಚಿವ ಪಾಳೇಕರ್ ಮಾತನಾಡುವ ಭರದಲ್ಲಿ ಕನ್ನಡಿಗರ ಬಗ್ಗೆ ಅವಹೇಳನಕಾರಿ ಶಬ್ಧಗಳನ್ನು ಬಳಸಿರುವುದು ಸರಿಯಲ್ಲ. ಇದನ್ನು ನಾನು ಕಟು ಶಬ್ಧಗಳಿಂದ ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಜನರ ಬಗ್ಗೆ ಅಪಮಾನಕರ ಪದ ಬಳಕೆ ಅಧಿಕಾರವನ್ನು ಅವರಿಗೆ ಯಾರೂ ನೀಡಿಲ್ಲ. ಈ ಕೂಡಲೇ ಗೋವಾ ನೀರಾವರಿ ಸಚಿವ ಪಾಳೇಕರ್ ಕನ್ನಡಿಗರ ಕ್ಷಮೆ ಕೋರಬೇಕು ಎಂದು ಯಡಿಯೂರಪ್ಪ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಡೋಂಗಿ ನಡೆ: ‘ಕರ್ನಾಟಕದವರ ಹರಾಮಿಗಳು’ ಎಂಬ ಗೋವಾ ನೀರಾವರಿ ಸಚಿವ ಪಾಳೇಕರ್ ಹೇಳಿಕೆ ಖಂಡಿಸುವ ನೆಪದಲ್ಲಿ ಬಿಜೆಪಿ ಮುಖಂಡರು ತಮ್ಮ ಡೋಂಗಿತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ಕೋನರೆಡ್ಡಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆ ಜಾರಿ ವಿಷಯದಲ್ಲಿ ಬಿಜೆಪಿ ಮುಖಂಡರು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಗೋವಾ ಸಿಎಂ, ಬಿಎಸ್‌ವೈಗೆ ಪತ್ರ ಬರೆಯುವ ಬದಲು ಮಹದಾಯಿ ನ್ಯಾಯಮಂಡಳಿಗೆ ಪತ್ರ ಬರೆಯಬೇಕಿತ್ತು ಎಂದು ಆಗ್ರಹಿಸಿದರು.
2018ರ ಫೆಬ್ರವರಿ 6ಕ್ಕೆ ಮಹದಾಯಿ ವಿವಾದ ನ್ಯಾಯಾಧೀಕರಣದ ಮುಂದೆ ವಿಚಾರಣೆಗೆ ಬರಲಿದ್ದು, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸರ್ವಪಕ್ಷ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಬಳಿಗೆ ಕೊಂಡೊಯ್ಯಬೇಕು ಎಂದು ಕೋನರೆಡ್ಡಿ ಒತ್ತಾಯಿಸಿದರು.







