ಮತ್ತೊಂದು ಧರ್ಮವನ್ನು ಸಹಿಸದ ನಿಮ್ಮದೆಂತಹ ಹಿಂದುತ್ವ: ಬಿಜೆಪಿ ಮುಖಂಡರಿಗೆ ದೇವೇಗೌಡ ಪ್ರಶ್ನೆ

ಬೆಂಗಳೂರು, ಜ. 15: ‘ಹಿಂದುತ್ವ ಸಿದ್ಧಾಂತ ಅಂದರೆ ಸಹನೆ. ಆದರೆ, ನೀವು ಮತ್ತೊಂದು ಧರ್ಮವನ್ನು ಸಹಿಸದೇ ಇದ್ದರೆ ನಿಮ್ಮದೆಂತಹ ಹಿಂದುತ್ವ’ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ, ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ್ದಾರೆ.
ಸೋಮವಾರ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಹೆಚ್ಚು ಹತ್ಯೆಗಳಾದವಲ್ಲ, ಅದೇನಾ ಹಿಂದುತ್ವ ಎಂದು ಕೆಣಕಿದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಪೀಠದ ಗುರುಗಳು ಆಚರಿಸುತ್ತಾರಲ್ಲ ಅದು ನಿಜವಾದ ಹಿಂದುತ್ವ ಎಂದ ದೇವೇಗೌಡ, ನಮಗೆ ಎಲ್ಲ ದೇವರಲ್ಲಿ ನಂಬಿಕೆಯಿದೆ. ಮಾತ್ರವಲ್ಲ, ಅನ್ಯಧರ್ಮದ ಬಗ್ಗೆ ವಿಶ್ವಾಸವೂ ಇದೆ ಎಂದು ಸ್ಪಷ್ಟಣೆ ನೀಡಿದರು.
ಲೋಕ ಕಲ್ಯಾಣಕ್ಕೆ ಯಾಗ
ಶೃಂಗೇರಿಯಲ್ಲಿ ನಾನು ಇತ್ತೀಚೆಗೆ ಶತರುದ್ರಯಾಗ ಮಾಡಿಸಿದ್ದು ಶತ್ರುನಾಶಕ್ಕಲ್ಲ. ಅದಕ್ಕೆ ಶತ ಚಂಡಿಯಾಗ ಮಾಡುತ್ತಾರೆ. ಕೊಲ್ಲೂರಲ್ಲಿ ಯಾರೋ ಚಂಡಿಯಾಗ ಮಾಡಿಸಿದ್ರಲ್ಲ, ಅದು ಶತ್ರುನಾಶಕ್ಕೆ ಮಾಡಿದ್ದು. ನಾವು ಮಾಡಿಸಿದ ಶತರುದ್ರಯಾಗ ಲೋಕ ಕಲ್ಯಾಣಕ್ಕಾಗಿ ಎಂದು ಅವರು ಸ್ಪಷ್ಟಪಡಿಸಿದರು.
ನಮಗೆ ಸಿದ್ದು ಬೆಂಬಲ ಬೇಕಿಲ್ಲ: ಸಂಕ್ರಾಂತಿ ಶುಭದಿನ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ನಮ್ಮ ಪಕ್ಷ ಸೇರ್ಪಡೆಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕರಿಂದ ಐದು ಸ್ಥಾನ ಗೆಲ್ಲುವ ಅವಕಾಶ ಇದೆ ಎಂದ ಅವರು, ಜೆಡಿಎಸ್ ಅಪ್ಪ- ಮಕ್ಕಳ ಪಕ್ಷವಲ್ಲ. ಅದು ಕಾಂಗ್ರೆಸ್ ಪಕ್ಷಕ್ಕೆ ಅನ್ವಯಿಸುತ್ತದೆ ಎಂದು ಟೀಕಿಸಿದರು.
ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಸ್ವಂತ ಶಕ್ತಿಯಿಂದ ಸರಕಾರ ರಚನೆ ಮಾಡುತ್ತೇವೆ. ನಮಗೆ ಸಿದ್ದರಾಮಯ್ಯನವರ ಬೆಂಬಲ ಅಗತ್ಯವಿಲ್ಲ. ಜೆಡಿಎಸ್ ಸತ್ತೇ ಹೋಯಿತು ಎಂದುಕೊಂಡಿದ್ದ ಸಿದ್ದರಾಮಯ್ಯನವರಿಗೆ ಈಗ ಪಕ್ಷ ಏನೆಂದು ಅರ್ಥವಾಗಿದೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಾಗಿರಬಹುದು. ಆದರೆ, ನಮಗೇನಲ್ಲ. ಮಾರ್ಚ್ ವೇಳೆಗೆ ರಾಜ್ಯದಲ್ಲಿ ಇನ್ನೂ ಏನೇನು ಬೆಳವಣಿಗೆಯಾಗುತ್ತದೆ ಎಂದು ಕಾದು ನೋಡಿ ಎಂದ ದೇವೇಗೌಡ, ನಾವು ದೇವರನ್ನೂ ನಂಬುತ್ತೇವೆ. ರಾಜ್ಯದ ಜನತೆಯ ಆಶೀರ್ವಾದದಿಂದ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.







