ಧರ್ಮ ಹುಟ್ಟಿರುವುದು ಮಾನವನ ಏಳಿಗೆಗೆ: ಮಲ್ಲಿಕಾರ್ಜುನ ಖರ್ಗೆ

ಬೆಳಗಾವಿ, ಜ.15: ಧರ್ಮ ಮನುಷ್ಯನಿಗೆ ಬೇಕು, ಧರ್ಮ ಮನುಷ್ಯನ ಕಲ್ಯಾಣಕ್ಕಾಗಿ ಹುಟ್ಟಿದೆ, ಅನೇಕ ಧರ್ಮಗಳು ಹುಟ್ಟಿದ್ದು ಮನುಷ್ಯನ ಎಳಿಗೆಗಾಗಿ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಮುಗಳಖೋಡ ಜಿಡಗಾ ಮಠದಲ್ಲಿ ನಡೆಯುತ್ತಿರುವ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಒಂದೇ ಸೂರಿನಡಿ ಲಕ್ಷ ಮತದ ಭಕ್ತರನ್ನು ಕೂಡಿಸುವ ಯಾವುದೇ ಮಠವನ್ನು ನಾನು ಕರ್ನಾಟಕದಲ್ಲಿ ನೋಡಿಲ್ಲ, ಆ ಕಾರ್ಯ ಮುಗಳಖೋಡ ವುಠದಲ್ಲಿ ಆಗಿದೆ ಎಂದು ಹೇಳಿದರು.
ಮುಗಳಖೋಡ ಮಠದೊಂದಿಗೆ ತಮ್ಮ ಕುಟುಂಬದ ನಂಟನ್ನು ನೆನಪಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ, ನನ್ನ ತಂದೆ ಮುಗಳಖೋಡ ಮಠದ ಪರಮ ಭಕ್ತರಾಗಿದ್ದರು. ಅವರಿಗೆ ಸಂಬಳ ಬರುತ್ತಿದ್ದಂತೆ ಮಠಕ್ಕೆ ಬಂದು ಬಿಡುತ್ತಿದ್ದರು. ನನ್ನ ಜೀವನದಲ್ಲಿ ಇನ್ನೊಮ್ಮೆ ಈ ಮಠಕ್ಕೆ ಬರುತ್ತೆನೊ ಇಲ್ಲವೊ ಗೊತ್ತಿಲ್ಲ, ಆದರೆ ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಸೇರಿದ್ದು ನನಗೆ ಖುಷಿ ತಂದಿದೆ ಎಂದು ಹೇಳಿದರು.
ಮುಗಳಖೋಡ ಜಿಡಗಾ ಮಠದ ಪೀಠಾಧಿಪತಿ ಡಾ.ಮುರಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಮುಗಳಖೋಡ ಅಕ್ಕಪಕ್ಕದ 5 ಗ್ರಾಮಗಳನ್ನು ದತ್ತು ಸ್ವೀಕರಿಸಿ ರಾಜ್ಯದ ಮಾದರಿ ಗ್ರಾಮವನ್ನಾಗಿ ರೂಪಿಸುತ್ತೇವೆ ಎಂದು ಭರವಸೆ ನೀಡಿದರು.





