ಯುವತಿಯನ್ನು ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದರು

ಫರೀದಾಬಾದ್, ಜ. 15: ಕೆಲಸ ಮುಗಿಸಿ ಸೋಮವಾರ ಸಂಜೆ ಮನೆಗೆ ಹಿಂದಿರುಗುತ್ತಿದ್ದ 23 ವರ್ಷದ ಯುವತಿಯನ್ನು ನಾಲ್ವರು ಯುವಕರು ಅಪಹರಿಸಿ ಚಲಿಸುತ್ತಿರುವ ಕಾರಿನಲ್ಲಿ ಎರಡು ಗಂಟೆಗಳ ಕಾಲ ಅತ್ಯಾಚಾರ ಎಸಗಿದ ಘಟನೆ ಫರೀದಾಬಾದ್‌ನಲ್ಲಿ ನಡೆದಿದೆ.
ಅತ್ಯಾಚಾರ ಎಸಗಿದ ಯುವಕರು ಯುವತಿಯನ್ನು ಬಲ್ಲಾಭ್‌ಗಡದಲ್ಲಿ ಬಿಟ್ಟು ಹೋಗಿದ್ದಾರೆ. ಯುವತಿಯ ದೇಹದಲ್ಲಿ ಗಾಯಗಳಾಗಿವೆ. ಯುವತಿಯ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಮೂವರು ಯುವಕರು ನನ್ನ ಮೇಲೆ ಅತ್ಯಾಚಾರ ಎಸಗಿದರು. ಇನ್ನೋರ್ವ ಯುವಕ ಕಾರು ಚಾಲನೆ ಮಾಡುತ್ತಿದ್ದ ಎಂದು ಯುವತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘‘ಯುವತಿ ಕೆಲಸ ಮುಗಿಸಿ 6.30ಕ್ಕೆ ಮನೆಗೆ ಹಿಂದಿರುಗುತ್ತಿದ್ದಾಗ ಕಾರಿನಲ್ಲಿ ಅಪಹರಿಸಲಾಗಿದೆ. ಎರಡು ಗಂಟೆಗಳ ಬಳಿಕ ಬಲ್ಲಾಭ್‌ಗಢದಲ್ಲಿ ಬಿಟ್ಟು ಹೋಗಲಾಗಿದೆ. ಹಳೆ ಫರೀದಾಬಾದ್ ಪೊಲೀಸ್ ಠಾಣೆಯಲ್ಲಿ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ನಾಲ್ವರು ಆರೋಪಿಗಳನ್ನು ಇನ್ನಷ್ಟೇ ಬಂಧಿಸಬೇಕಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ’’ ಎಂದು ವಿಶೇಷ ತನಿಖಾ ತಂಡ (ಸಿಟ್)ದ ಮುಖ್ಯಸ್ಥ ಪೂಜಾ ದಾಬ್ಲಾ ತಿಳಿಸಿದ್ದಾರೆ.