ಅಲ್ಪಸಂಖ್ಯಾತರ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಶ್ರಮಿಸಿ: ನಸೀರ್ ಅಹಮದ್

ಬೆಂಗಳೂರು, ಜ.15: ರಾಜ್ಯ ಸರಕಾರವು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಕಾರ್ಯಕ್ರಮಗಳು, ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಸರಕಾರಿ ಸಿಬ್ಬಂದಿಗಳು ಶ್ರಮಿಸಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್ ಅಹಮದ್ ತಿಳಿಸಿದರು.
ಸೋಮವಾರ ನಗರದ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಕೆಎಎಸ್ ಅಧಿಕಾರಿಗಳ ಸಂಘದ ಸಭಾಂಗಣದಲ್ಲಿ ಕರ್ನಾಟಕ ಮುಸ್ಲಿಂ ಎಂಪ್ಲಾಯಿಸ್ ಕಲ್ಚರಲ್ ಅಸೋಸಿಯೇಷನ್(ಕೆ-ಮೆಕಾ)ನ ರಾಜ್ಯಮಟ್ಟದ ಎರಡನೆ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರವು ಉತ್ತಮವಾದ ಆಡಳಿತ ನೀಡುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅರ್ಹರಿಗೆ ಈ ಯೋಜನೆಗಳು, ಕಾರ್ಯಕ್ರಮಗಳ ಪ್ರಯೋಜನ ಕಲ್ಪಿಸಿಕೊಡುವಲ್ಲಿ ಸರಕಾರದ ಸಿಬ್ಬಂದಿ, ಅಧಿಕಾರಿಗಳ ಪಾತ್ರ ಮಹತ್ವದ್ದು ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿರುವ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಒಂದು ಲಕ್ಷ ಮನೆಗಳ ಯೋಜನೆಯನ್ನು ಸರಕಾರ ಘೋಷಿಸಿದೆ. ಇದರಲ್ಲಿ ಅಲ್ಪಸಂಖ್ಯಾತರಿಗೆ 10 ಸಾವಿರ ಮನೆಗಳನ್ನು ಮೀಸಲಿಟ್ಟಿದೆ. ಆದರೆ, ದುರಾದೃಷ್ಟವಶಾತ್ ಈ ಯೋಜನೆಯ ಲಾಭ ಪಡೆಯಲು ಆಸಕ್ತಿ ತೋರುತ್ತಿಲ್ಲ. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವ ಅಗತ್ಯವಿದೆ ಎಂದು ನಸೀರ್ ಅಹಮದ್ ತಿಳಿಸಿದರು.
ಕೆ-ಮೆಕಾ ಸಂಘದ ರಾಜ್ಯಾಧ್ಯಕ್ಷ ಮುಹಮ್ಮದ್ ಅಜ್ಮಲ್ ಆರೀಫ್ ಮಾತನಾಡಿ, ನಮ್ಮ ಸಂಘದಲ್ಲಿ ಸುಮಾರು 20 ಸಾವಿರ ಸದಸ್ಯರಿದ್ದು, ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಗಳು ರಚನೆಯಾಗಿವೆ. ಸರಕಾರವು ಮುಸ್ಲಿಮರಿಗಾಗಿ ಜಾರಿಗೆ ತರುವ ಯೋಜನೆಗಳು, ಕಾರ್ಯಕ್ರಮಗಳನ್ನು ಅವರಿಗೆ ತಿಳಿಸುವಲ್ಲಿ ನಾವು ಸಕ್ರಿಯರಾಗಿದ್ದೇವೆ ಎಂದರು.
ಪ್ರತಿಯೊಂದು ಮಸೀದಿಗೆ ನೋಟಿಸ್ ಬೋರ್ಡ್ ಅನ್ನು ಕೊಡುಗೆಯಾಗಿ ನೀಡಿ ಪ್ರತಿ ತಿಂಗಳು ಎರಡು ಶುಕ್ರವಾರಗಳಂದು ಅದರಲ್ಲಿ ಮುಸ್ಲಿಮರಿಗೆ ಸರಕಾರದಿಂದ ಸಿಗುವ ಸವಲತ್ತುಗಳು, ಉದ್ಯೋಗಾವಕಾಶಗಳು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮಾಹಿತಿಯನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ಮುಸ್ಲಿಮರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಉದ್ಯೋಗ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜತೆಗೆ, ಸಾಮೂಹಿಕ ವಿವಾಹಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ಕರೆತರುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಉಮ್ರಾ ಪ್ರವಾಸ: ಪ್ರತಿ ತಿಂಗಳು ಒಬ್ಬ ಸದಸ್ಯರಿಗೆ ಸಂಘದ ವತಿಯಿಂದ ಪವಿತ್ರ ಉಮ್ರಾ ಯಾತ್ರೆಗೆ ಕಳುಹಿಸಲು ನಿರ್ಧರಿಸಲಾಗಿದೆ. ಅದರಂತೆ, ಮೊದಲನೆಯವರಾಗಿ ಈ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಎಂ.ಬುಡಾನ್‌ಖಾನ್‌ರನ್ನು ಕಳುಹಿಸಲಾಗುತ್ತಿದ್ದು, ಅವರಿಗೆ ‘ಎಹ್ರಾಮ್’ ಕಿಟ್ ಅನ್ನು ಮೌಲಾನ ಮುಹಮ್ಮದ್ ಮಖ್ಸೂದ್ ಇಮ್ರಾನ್ ರಶಾದಿ ಹಸ್ತಾಂತರಿಸಿದರು ಎಂದು ಅಜ್ಮಲ್ ಆರೀಫ್ ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ಏಜಾಝ್ ಅಹ್ಮದ್, ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಮೊಹ್ಸಿನ್ ಅನ್ಸಾರಿ, ಖಜಾಂಚಿ ತಜಮ್ಮುಲ್ ತನ್ವೀರ್ ಪಾಷ, ಸಮಾಜ ಸೇವಕ ಆಬಿದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







