ಕನ್ನಡಿಗರು ಸಂಕುಚಿತ ಮನೋಭಾವದವರಲ್ಲ: ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು, ಜ.15: ಕರ್ನಾಟಕದಲ್ಲಿ ಎಲ್ಲ ಜಾತಿ, ಧರ್ಮದ ಜನರಿದ್ದಾರೆ. ಕನ್ನಡಿಗರು ಯಾವುದೇ ಸಂಕುಚಿತ ಮನೋಭಾವನೆಯನ್ನು ಹೊಂದಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಸೋಮವಾರ ನಗರದ ಹಲಸೂರು ಕೆರೆ ಬಳಿ ವಿಶ್ವಕವಿ ತಿರುವಳ್ಳವರ್ ಜಯಂತಿ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಭಾರತೀಯರು. ಯಾವುದೇ ರಾಜ್ಯದಲ್ಲಿದ್ದರೂ ಆಯಾ ರಾಜ್ಯದ ಭಾಷೆ ಕಲಿಯಬೇಕು. ಅದೇ ರೀತಿಯಲ್ಲಿ ಇಲ್ಲಿರುವ ಪರ ಭಾಷಿಕರು ಕನ್ನಡ ಕಲಿಯಬೇಕು. ಜೊತೆಗೆ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದು.
ತಮಿಳು ಕವಿ ತಿರುವಳ್ಳವರ್ ಅವರು ರಚಿಸಿದ ಸಾಹಿತ್ಯ 21 ಶತಮಾನದಲ್ಲಿಯೂ ಪ್ರತಿಯೊಬ್ಬರ ಮನಸ್ಸಿನಲ್ಲಿ ಉಳಿದುಕೊಂಡಿದೆ ಹಾಗೂ ವಾಸ್ತವಕ್ಕೆ ತುಂಬಾ ಹತ್ತಿರವಿದೆ. ಜನರ ಬದುಕಿನ ಸಮಸ್ಯೆಗಳನ್ನು ಪ್ರಸ್ಥಾಪಿಸುತ್ತಾ, ಅದರ ಪರಿಹಾರ ಮಾರ್ಗಗಳನ್ನು ಒದಗಿಸುವಂತಿದೆ ಎಂದ ಅವರು, ತಿರುವಳ್ಳವರ್ ತಮಿಳುನಾಡಿಗೆ ಮಾತ್ರ ಸೀಮಿತವಾಗದೇ ಇಡೀ ದೇಶಕ್ಕೆ ಸೇರಿದವರಾಗಿದ್ದಾರೆ. ತಮ್ಮ ಸಾಹಿತ್ಯ ದೇಶದ ಎಲ್ಲ ಕಡೆ ಪಸರಿಸಿದೆ ಎಂದು ನುಡಿದರು.
ತಿರುವಳ್ಳವರ್ ಪ್ರತಿಮೆ ಸ್ಥಾಪನೆ ಮಾಡುವ ಸಲುವಾಗಿ ಹಿರಿಯ ಪತ್ರಕರ್ತರು ಹಾಗೂ ತಮಿಳು ಸಂಘದ ಪದಾಧಿಕಾರಿಗಳು ನನ್ನ ಬಳಿ ಬಂದಿದ್ದರು. ಆ ಸಂದರ್ಭದಲ್ಲಿ ತಮಿಳಿನಲ್ಲಿ ರಚಿಸಿದ್ದ ಕೃತಿ ನೀಡಿದರು. ನನಗೆ ತಮಿಳು ಓದಲು ಬರುತ್ತಿರಲಿಲ್ಲ. ಆದುದರಿಂದ ಕನ್ನಡಕ್ಕೆ ಅನುವಾದ ಮಾಡಿಸಿಕೊಂಡು ಬಂದು ಕೊಟ್ಟಿದ್ದರು. ಅದನ್ನು ಓದಿದ ನಂತರ ಗೊತ್ತಾಯಿತು ತಿರುವಳ್ಳವರ್ ಸಾಮಾನ್ಯ ಕವಿಯಲ್ಲ. ಅವರೊಬ್ಬ ವಿಶ್ವ ಕವಿ ಎಂದು ಸಚಿವರು ಹೇಳಿದರು.
ಬೆಂಗಳೂರು ಮಹಾ ನಗರದಲ್ಲಿ ಅವರ ಪ್ರತಿಮೆ ಸ್ಥಾಪನೆ ಮಾಡುವ ಸಂಬಂಧ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದು ವಿವಾದಕ್ಕೂ ಕಾರಣವಾಗಿತ್ತು. ಆದರೆ, ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ, ಬೆಂಗಳೂರಿನಲ್ಲಿ ತಿರುವಳ್ಳವರ್ ಪ್ರತಿಮೆ ಸ್ಥಾಪನೆ ಮಾಡಲಾಯಿತು ಎಂದು ಸಚಿವ ಜಾರ್ಜ್ ತಿಳಿಸಿದರು.
ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ವಿಶ್ವದಲ್ಲೇ ಸರ್ವ ಶ್ರೇಷ್ಠ ಕವಿಯಾಗಿರುವ ತಿರುವಳ್ಳವರ್, ತಮ್ಮ ಸಾಹಿತ್ಯದ ಮೂಲಕ ಜನರ ಬದುಕಿನ ಬಗ್ಗೆ ಪ್ರಶ್ನಿಸಿದ್ದಾರೆ ಹಾಗೂ ಸಮಸ್ಯೆ ಮತ್ತು ಪರಿಹಾರಗಳ ಬಗ್ಗೆ ತಿಳಿಸಿದ್ದಾರೆ ಎಂದರು.
ಮೇಯರ್ ಸಂಪತ್ ರಾಜ್ ಮಾತನಾಡಿ, ಸಚಿವ ಜಾರ್ಜ್ ಮತ್ತು ಶಾಸಕ ದಿನೇಶ್ ಗುಂಡೂರಾವ್ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳಿದ್ದರೂ ನನ್ನನ್ನು ಮೇಯರ್ ಆಗಿ ಮಾಡಿದ್ದಾರೆ. ಅವರಿಗೆ ಅಭಾರಿಯಾಗಿದ್ದೇನೆ ಎಂದು ಹೇಳಿದರು. ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಎಸ್.ಎಸ್.ಪ್ರಕಾಶ್, ಬಿಬಿಎಂಪಿ ನಾಮ ನಿರ್ದೇಶಿತ ಸದಸ್ಯ ರಘು ದೇವರಾಜ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಶೇಖರ್ ಹಾಜರಿದ್ದರು.







