ತಮಿಳುನಾಡಿಗೆ ಕಾವೇರಿ ನೀರು ಬಿಡಬೇಡಿ: ಅಂಬರೀಶ್
.jpg)
ಬೆಂಗಳೂರು, ಜ.15: ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಕಾವೇರಿ ಜಲಾಶಯದಿಂದ ನೀರು ಬಿಡುವಂತೆ ತಮಗೆ ಪತ್ರ ಬರೆದಿದ್ದು, ಅವರ ಪತ್ರಕ್ಕೆ ಸ್ಪಂದಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಸಚಿವ ಎಂ.ಎಚ್. ಅಂಬರೀಶ್ ಮನವಿ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ತಮಿಳುನಾಡು ಸರಕಾರದ ಪತ್ರಕ್ಕೆ ತಾವು ಸ್ಪಂದಿಸುವುದಿಲ್ಲವೆಂಬ ವಿಶ್ವಾಸ ನನ್ನದು. ಈಗಾಗಲೆ, ತಾವು ನೀರು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ತಮ್ಮ ನಿಲುವಿಗೆ ನಾನು ಸೇರಿದಂತೆ ಕಾವೇರಿ ಅಚ್ಚುಕಟ್ಟು ಪ್ರದೇಶದ ಎಲ್ಲ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ರೈತ ಸಂಘಟನೆಗಳು, ಹೋರಾಟಗಾರರು ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸತತವಾಗಿ ಬರಗಾಲವಿರುವುದರಿಂದ ಜಲಾಶಯಗಳಲ್ಲಿ ನಿಗದಿತವಾದ ನೀರು ಸಂಗ್ರಹವಾಗಿಲ್ಲ. ಈಗಿರುವ ಪ್ರಮಾಣ ಲೆಕ್ಕ ಹಾಕಿದರೆ ಬೆಂಗಳೂರಿಗೆ ಮತ್ತು ಕಾವೇರಿ ಕೊಳ್ಳದಲ್ಲಿರುವ ಪ್ರದೇಶಗಳಿಗೆ ಕುಡಿಯುವ ನೀರಿಗೆ ಹಾಗೂ ಜಾನುವಾರುಗಳಿಗೆ, ಬೆಳೆದು ನಿಂತಿರುವ ಬೆಳೆಗಳಿಗೆ ಸಾಕುವುದೇ ಕಷ್ಟವಾಗಿರುವುದರಿಂದ ಯಾವುದೆ ಕಾರಣಕ್ಕೂ ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡಬಾರದೆಂದು ಆ ಭಾಗದ ಜನಪ್ರತಿನಿಧಿಯಾಗಿ ಮತ್ತು ರೈತಬಾಂಧವರ ಪರವಾಗಿ ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಅಂಬರೀಶ್ ತಿಳಿಸಿದ್ದಾರೆ.
ನ್ಯಾಯಾಧೀಕರಣದ ತೀರ್ಪಿನ ಅನ್ವಯ ನೀರು ಬಿಡಲು ತಮಿಳುನಾಡಿನ ಮುಖ್ಯಮಂತ್ರಿಗಳು ಕೋರಿದ್ದಾರೆ. ಆದರೆ, ನೀರಿಲ್ಲದೇ ನೀರನ್ನು ಎಲ್ಲಿಂದ ಬಿಡುವುದು ರಾಜ್ಯದ ಮುಖ್ಯಮಂತ್ರಿಯಾಗಿ ನೀವು ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ಬಿಡದೇ ರೈತರ ಹಿತವನ್ನು ಕಾಪಾಡಬೇಕು ಹಾಗೂ ಅಗತ್ಯಬಿದ್ದರೆ ಜನಪ್ರತಿನಿಧಿಗಳ, ರೈತ ಸಂಘಟನೆಗಳು ಹಾಗೂ ಹೋರಾಟಗಾರರ ಮತ್ತು ಸರ್ವ ಪಕ್ಷದ ಮುಖಂಡರ ಸಭೆಯನ್ನು ಕರೆದು ಚರ್ಚಿಸಿ ತೀರ್ಮಾನಕ್ಕೆ ಬರಬೇಕು ಎಂದು ಅವರು ಕೋರಿದ್ದಾರೆ.







