ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣ: ವಿದ್ಯಾರ್ಥಿಯ ಬಂಧನ

ಕರ್ನಾಲ್, ಜ. 15: ಕುರುಕ್ಷೇತ್ರದ ಜಿಲ್ಲೆಯ ಝಾನ್ಸಾದ 15 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದ ಆರೋಪದಲ್ಲಿ 12ನೆ ತರಗತಿಯ ವಿದ್ಯಾರ್ಥಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರ್ಯಾಣದ ಜಿಂದ್ ಜಿಲ್ಲೆಯ ಬುಧಖಾಡಾ ಗ್ರಾಮದ ಸಮೀಪ ಬಾಲಕಿಯ ಮೃತದೇಹ ಅರೆನಗ್ನ ಹಾಗೂ ಘಾಸಿಗೊಳಿಸಿದ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕುರುಕ್ಷೇತ್ರ ಜಿಲ್ಲೆಯ ಝಾನ್ಸಾದಿಂದ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ.
‘‘ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಪ್ರಮುಖ ಆರೋಪಿಗಳನ್ನು ಇದುವರೆಗೆ ಬಂಧಿಸಲು ಸಾಧ್ಯವಾಗಿಲ್ಲ. ಅವರನ್ನು ಬಂಧಿಸುತ್ತೇವೆ” ಎಂದು ಕುರುಕ್ಷೇತ್ರದ ಪೊಲೀಸ್ ಅಧೀಕ್ಷಕ ಅಭಿಷೇಕ್ ಗರ್ಗ್ ತಿಳಿಸಿದ್ದಾರೆ.
ಬಂಧಿತ 12ನೇ ತರಗತಿ ವಿದ್ಯಾರ್ಥಿ ಬಾಲಕಿಯ ನೆರೆ ಮನೆಯವನು. ಆತನ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆತ ಅಪ್ರಾಪ್ತ ಎಂದ ಶಂಕಿಸಲಾಗಿದೆ. ಆತನ ವಯಸ್ಸನ್ನು ಪರಿಶೀಲಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಶವಪರೀಕ್ಷೆ ಸಂದರ್ಭ ಬಾಲಕಿಯ ದೇಹದಲ್ಲಿ 19 ಗಾಯಗಳು ಕಂಡು ಬಂದಿವೆ. ಓರ್ವ ವ್ಯಕ್ತಿ ನಡೆಸಿದ ಅತ್ಯಾಚಾರ ಇದಲ್ಲ. ಬಾಲಕಿಯ ಮೇಲೆ ಎರಡಕ್ಕಿಂತ ಹೆಚ್ಚಿನ ಜನರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಆಕೆಯ ಗುಪ್ತಾಂಗದ ಒಳಗೆ ಯಾವುದೋ ವಸ್ತು ತೂರಿಸಿರುವ ಸಾಧ್ಯತೆ ಇದೆ. ಆಕೆಯ ಯಕೃತ್ತು ಘಾಸಿಕೊಂಡಿದೆ ಎಂದು ಪಿಜಿಐಎಂಎಸ್‌ನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಸ್.ಕೆ. ಧತ್ತರ್‌ವಾಲ್ ತಿಳಿಸಿದ್ದಾರೆ.
ಆಕೆಯ ಮೃತದೇಹ ಮೇಲೆ ಒಂದು ಹರಿದ ಅಂಗಿ ಮಾತ್ರ ಇತ್ತು. ಮುಖ, ಕುತ್ತಿಗೆ, ತುಟಿ ಹಾಗೂ ಎದೆ-ಹೀಗೆ ಬಾಲಕಿಯ ದೇಹದ ಎಲ್ಲ ಭಾಗಗಳ ಮೇಲೂ ಗಾಯಗಳಿತ್ತು. ಲೈಂಗಿಕ ದೌರ್ಜನ್ಯ ಸಂದರ್ಭ ಬಾಲಕಿ ತೀವ್ರ ಪ್ರತಿರೋಧ ಒಡ್ಡಿರುವ ಸಾಧ್ಯತೆ ಇದೆ ಎಂದು ಧತ್ತರ್‌ವಾಲ್ ಹೇಳಿದ್ದಾರೆ.